ಭಾಗಮಂಡಲ, ಫೆ. 14: ಪುಣ್ಯಕ್ಷೇತ್ರ ಭಾಗಮಂಡಲ ಪ್ರವಾಸೀ ಕ್ಷೇತ್ರವಾಗಿ ಮಾತ್ರವಲ್ಲ. ಜೇನು ಕೃಷಿಯ ಸಂಶೋಧನೆಯಲ್ಲೂ ಖ್ಯಾತಿ ಹೊಂದಿದೆ. ರಾಜ್ಯದ ಏಕೈಕ ಜೇನು ಕೃಷಿ ತರಬೇತಿ ಕೇಂದ್ರ ಭಾಗಮಂಡಲ ದಲ್ಲಿದ್ದು ಹಲವರು ತರಬೆತಿ ಹೊಂದಿದ್ದಾರೆ. ಇದೀಗ ಜೇನು ತರಬೇತಿ ಕೇಂದ್ರದಲ್ಲಿ ಸುಸಜ್ಜಿತ ಹನಿಪಾರ್ಕ್ ರೂಪುಗೊಳ್ಳಲಿದ್ದು ಜೇನು ನೊಣಗಳ ಸಂಶೋಧನೆ, ನೊಣಗಳ ಬೆಳವಣಿಗೆಯ ಹಂತ ಗಳನ್ನು ತೋರಿಸುವ ಸ್ಲೈಡ್‍ಗಳು, ಚಾರ್ಟ್‍ಗಳು ಪ್ರದರ್ಶನಗೊಳ್ಳಲಿವೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ಕಾಮಗಾರಿ ಕಾರ್ಯ ಆರಂಭಗೊಂಡಿದೆ.
ರಾಜ್ಯದ ಏಕೈಕ ಜೇನು ಕೃಷಿ ತರಬೇತಿ ಕೇಂದ್ರ ಎಂಬ ಖ್ಯಾತಿಯ ಈ ಕೇಂದ್ರವು 1953ರಲ್ಲಿ ಆರಂಭ ಗೊಂಡಿದ್ದು (ಮೊದಲ ಪುಟದಿಂದ) ಈಗ ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿದೆ. ಈಗ ಸಿದ್ಧ ಗೊಳ್ಳುತ್ತಿರುವ ಹನಿಪಾರ್ಕ್‍ನ ಅಭಿವೃದ್ಧಿಗಾಗಿ ಗೋಣಿಕೊಪ್ಪಲ್ಲಿನ ಕೃಷಿವಿಜ್ಞಾನ ಕೇಂದ್ರದ ಡಾ. ಕೆಂಚಾರೆಡ್ಡಿ ನೇತೃತ್ವದಲ್ಲಿ ಜೇನುನೊಣ ಗಳ ಕುರಿತು ಸಂಶೋದನೆ ನಡೆಸಲಾಗಿದೆ. ತರಬೇತಿ ಕೇಂದ್ರದಲ್ಲಿ ಸುಮಾರು 33 ಲಕ್ಷ ರೂ. ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಲು ಅಗತ್ಯ ಪರಿಕರಗಳನ್ನು ಸಂಗ್ರಹಿಸಲಾಗಿದೆ.
ಭಾಗಮಂಡಲದಲ್ಲಿ 6.37 ಎಕರೆ ಸ್ಥಳದಲ್ಲಿ ಸ್ಥಾಪಿತವಾಗಿರುವ ಈ ತರಬೇತಿ ಕೇಂದ್ರದಲ್ಲಿ ಕೇವಲ ಹನಿಪಾರ್ಕ್ ಮಾತ್ರವಲ್ಲ. ಸುಸಜ್ಜಿತ ಬಾಲಕರ ಮತ್ತು ಬಾಲಕಿಯರ ವಸತಿ ಗೃಹಗಳು, ಅತಿಥಿಗೃಹ, ಮೀಟಿಂಗ್ ಹಾಲ್, ತರಗತಿ ಕೊಠಡಿಗಳು ಇವೆ. ತರಬೇತಿ ಕೇಂದ್ರ ಆರಂಭವಾದಲ್ಲಿಂದ ಇದುವರೆಗೆ 3950 ಮಂದಿ ಜೇನುಕೃಷಿ ತರಬೇತಿಯಲ್ಲಿ ಮೂರು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ್ದಾರೆ. ಇದಲ್ಲದೇ ಒಂದು ವಾರ, ಒಂದು ತಿಂಗಳ ತರಬೇತಿಯನ್ನು ರಾಜ್ಯದ ಹಲವರು ಹೊಂದಿದ್ದಾರೆ. ಬರೀ ತರಬೇತಿ ಪಡೆದುಕೊಳ್ಳುವವರಿಗೆ ಮಾತ್ರವಲ್ಲ. ಸಾರ್ವಜನಿಕರಿಗೆ, ಪ್ರವಾಸಿಗರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಯನಾಸಕ್ತರಿಗೆ ಈ ಕೇಂದ್ರವು ಆಕರ್ಷಣೀಯ ತಾಣವಾಗಿದೆ. ದೇಶ ವಿದೇಶಗಳಿಂದ ಈ ಕೇಂದ್ರದಲ್ಲಿ ಅಧ್ಯಯನ ನಡೆಸಿ ಪಿಹೆಚ್‍ಡಿ ಪಡೆದವರೂ ಇದ್ದಾರೆ ಎಂಬದು ಈ ಕೇಂದ್ರದ ಹೆಗ್ಗಳಿಕೆ.
ತರಬೇತಿ ಕೇಂದ್ರದಲ್ಲಿ 2006 ರಿಂದ ಜೇನು ಕೃಷಿ ತರಬೇತಿ ಸ್ಥಗಿತಗೊಂಡಿದ್ದು ಕಳೆದ ವರ್ಷದಿಂದ ಮತ್ತೆ ರಾಜ್ಯದ ಬೇರೆಬೇರೆ ಭಾಗಗಳಿಂದ ಆಸಕ್ತರು ತರಬೇತಿ ಪಡೆಯುತ್ತಿದ್ದಾರೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಯ ಅಧೀನದಲ್ಲಿದ್ದ ತರಬೇತಿ ಕೇಂದ್ರವು ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಗೊಂಡಿ ದ್ದರೂ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಹಾಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನಿವೃತ್ತಿಯ ಅಂಚಿನಲ್ಲಿದ್ದು ತರಬೇತಿ ಹೊಂದಿದವ ರನ್ನು ಇಲಾಖೆ ನೇಮಕ ಮಾಡಿಕೊಂಡರೆ ಮಾತ್ರ ತರಬೇತಿ ಕೇಂದ್ರ ಹಾಗೂ ಹನಿಪಾರ್ಕ್ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.
-ಸುನಿಲ್ ಕುಯ್ಯಮುಡಿ