ಮಡಿಕೇರಿ, ಫೆ. 14: ಕೊಡಗಿನ ಆದಿವಾಸಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪ್ರತಿಭಟನೆಯನ್ನು ಮುಂದೂಡಲಾಯಿತು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಡ್ಡಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವದು ಬಾಲಿಶತನ. ದಿಡ್ಡಳ್ಳಿಯಲ್ಲಿ ನಿಷೇಧಾಜ್ಞೆ ಮಾಡಿ, ಹೊರಗಿನವರು ಬರಬಾರದು ಎಂದು ಹೇಳಿರುವದು ಸೂಕ್ತ ಕ್ರಮ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಾವು ಹೊರಗಿನವರೆಲ್ಲ, ನಾವು ಭಾರತೀಯರು, ಕನ್ನಡಿಗರು. ಕನ್ನಡಿಗರು ತೊಂದರೆಯಲ್ಲಿರುವಾಗ ನಾವು ಅವರಿಗೆ ಸಹಾಯ ಮಾಡುವದು ನಮ್ಮ ಕರ್ತವ್ಯ. ನಮ್ಮನ್ನು ಹೊರಗಿನವರು ಎನ್ನುವವರು ಮೊದಲು ಅದನ್ನು ಬದಲಿಸಿಕೊಳ್ಳಲಿ ಎಂದರು.ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿರುವದನ್ನು ವಿರೋಧಿಸುತ್ತೇವೆ. ಜಿಲ್ಲಾಡಳಿತದಿಂದ ಇದೇ ವರ್ತನೆ ಪುನರಾವರ್ತನೆ ಆದರೆ, ವಸಾಹತುಶಾಹಿ ಬ್ರಿಟೀಷರ ನಿರ್ಬಂಧದ ಕಾಯ್ದೆಗಳನ್ನು ಸ್ವಾತಂತ್ರ್ಯ ಹೋರಾಟಗಾರರು ಮುರಿದು ಮುನ್ನುಗುತ್ತಿದ್ದಂತೆಯೇ ನಾವು ಕೂಡ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಜಿಲ್ಲಾಡಳಿತದ ಅಪ್ರಜಾತಾಂತ್ರಿಕ ನಿರ್ಬಂಧ ಮುರಿದು ಜೈಲ್ ಭರೋ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರಕಾರದಿಂದ ಸಾಧ್ಯವಿಲ್ಲದಿದ್ದರೆ ಕೇಂದ್ರ ಸರಕಾರವನ್ನು ಕೇಳಲಿ ಎಂದು ಆಗ್ರಹಿಸಿದರು.

ಸಿ ಮತ್ತು ಡಿ ಜಮೀನು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಅರಣ್ಯ ಇಲಾಖೆಗೆ ಪರಿವರ್ತನೆ ಆಗದಿದ್ದಲ್ಲಿ ಅ ಜಮೀನುಗಳನ್ನು ವಾಪಸ್ ತೆಗೆದುಕೊಂಡು ಬಡವರಿಗೆ ಕೊಡುತ್ತೇವೆ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಡೀಮ್ಡ್ ಫಾರೆಸ್ಟ್ ಎಂಬದು ಭೂತವಾಗಿದ್ದು, ನಿಜವಾದ ಅರಣ್ಯ ಪ್ರದೇಶವಲ್ಲ. 4 ಮರವಿದ್ದ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಗೋಡು ತಿಮ್ಮಪ್ಪ ಅವರ ನಿರ್ಧಾರ ಸಮರ್ಪಕವಾಗಿದೆ. ನಿಜವಾದ ಅರಣ್ಯ ಪ್ರದೇಶವಾಗಿದ್ದರೆ ಅದನ್ನು ಉಳಿಸಿಕೊಳ್ಳಬೇಕು. ಆದರೆ ನಾಮಕಾವಸ್ಥೆಗೆ ಇರುವ ಅರಣ್ಯ ಪ್ರದೇಶವನ್ನು ಬಡಜನತೆಗೆ ನೀಡುವಂತಾಗಬೇಕೆಂದು ಆಗ್ರಹಿಸಿದರು.

ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಮಾತನಾಡಿ, ದಿಡ್ಡಳ್ಳಿಗೆ ಹೋಗದಂತೆ 144 ಸೆಕ್ಷನ್ ಹಾಕಿರುವದು ಸೆಕ್ಷನ್‍ನ ದುರುಪ ಯೋಗವಾಗಿದೆ ಎಂದು ಆಪಾದಿಸಿದರು.

(ಮೊದಲ ಪುಟದಿಂದ) ಸೋಮವಾರ ಜೈಲ್ ಭರೋ ಚಳವಳಿ ಮಾಡುವವರಿದ್ದೆವು, ಆದರೆ ಮುಖ್ಯಮಂತ್ರಿಗಳು ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದರಿಂದ ಅವರ ಮಾತಿಗೆ ಗೌರವ ನೀಡಿ ಮಾಲ್ದಾರೆಯಲ್ಲಿಯೇ ಪ್ರತಿಭಟನೆ ನಡೆಸಿ, ಸಭೆ ನಡೆಸಿದೆವು ಎಂದರು.

ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಅವರಿಗೆ ಅಲ್ಲಿನ ಜನತೆಗೆ ಯಾರೊಂದಿಗೂ ಸಂಪರ್ಕ ಇಲ್ಲದಂತೆ ಮಾಡಿ, ಅಲ್ಲಿನ ನಿವಾಸಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಉದ್ದೇಶದಿಂದ ಸೆಕ್ಷನ್ ವಿಧಿಸಲಾಗುತ್ತಿದೆ. ಆ ಮೂಲಕ ಆದಿವಾಸಿಗಳ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದಲ್ಲಿ ಈ ಸಮಸ್ಯೆಗೆ ಖಂಡಿತ ಪರಿಹಾರ ದೊರೆಯಲಿದೆ. ಆದರೆ ಇದರ ಮಧ್ಯದಲ್ಲಿ ಜಿಲ್ಲಾಡಳಿತ ವಿರೋಧ ವ್ಯಕ್ತ ಪಡಿಸುತ್ತಿದ್ದು, ಜಿಲ್ಲಾಡಳಿತದ ಪಿತೂರಿಯನ್ನು ನಾವು ವಿಫಲಗೊಳಿಸುತ್ತೇವೆ ಎಂದರು. ಅರಣ್ಯ ಇಲಾಖೆ, ಡೋಂಗಿ ಪರಿಸರವಾದಿಗಳು ಹಾಗೂ ಆದಿವಾಸಿಗಳಿಗೆ ಬದುಕುವ ಹಕ್ಕನ್ನು ನಿರಾಕರಿಸುತ್ತಾ ಬಂದಿರುವ ಕೆಲವರು ಆದಿವಾಸಿಗಳಿಗೆ ನಿವೇಶನ ನೀಡದಂತೆ ಪಿತೂರಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಮಟ್ಟದಲ್ಲಿ ನಮ್ಮ ಹೋರಾಟಕ್ಕೆ ಮಂತ್ರಿ ಮಂಡಲದಿಂದ ಬೆಂಬಲವಿದೆ. ಆದರೆ ಜಿಲ್ಲಾ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಆದರೆ ನಾವು ಆದಿವಾಸಿಗಳಿಗೆ ನ್ಯಾಯ ಕೊಡಿಸುವವರಿಗೆ ಹೋರಾಟ ನಡೆಸುತ್ತೇವೆ ಎಂದರು.