ಸೋಮವಾರಪೇಟೆ,ಫೆ.14: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಕಲಿ ಸಹಿ ಮೂಲಕ ಅವ್ಯವಹಾರ ನಡೆಸಿದ್ದು, ಆಡಳಿತ ಮಂಡಳಿಯನ್ನು ತಕ್ಷಣ ವಜಾಗೊಳಿಸಿ ಹೊಸದಾಗಿ ಚುನಾವಣೆಯನ್ನು ನಡೆಸಬೇಕೆಂದು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯೋರ್ವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ.ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಡಿ.ಎಸ್. ರಾಜಶೇಖರ್ ಎಂಬವರು ಜಿಲ್ಲಾ ಉಪ ನಿಬಂಧಕರಿಗೆ ದೂರು ನೀಡಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ತಾನು ನಾಮಪತ್ರ ಸಲ್ಲಿಸಿದ್ದು ತಾ. 11ರಂದು ನಾಮಪತ್ರ ಕ್ರಮಬದ್ಧವಾಗಿದೆಯೆಂದು ನೋಟೀಸ್ ಬೋರ್ಡ್‍ನಲ್ಲಿ ತಿಳಿಸಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳಲು ತಾ. 12ರ ಮಧ್ಯಾಹ್ನ 3ಗಂಟೆಯವರೆಗೆ ಅವಕಾಶವಿದ್ದು, ತಾನಾಗಲಿ ತನ್ನ ಸೂಚಕರಾಗಲಿ ನಾಮಪತ್ರ ವಾಪಸ್ ಪಡೆದಿಲ್ಲ. ಆದರೆ ನನ್ನ ಸಹಿಯನ್ನು ನಕಲಿ ಮಾಡಿ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ ಎಂದು ರಾಜಶೇಖರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತಾನು ಮೌಖಿಕವಾಗಿ ಚುನಾವಣಾಧಿಕಾರಿಯನ್ನು ಪ್ರಶ್ನಿಸಿದ ಸಂದರ್ಭ ನಿಮ್ಮ ಪರವಾಗಿ ಓರ್ವರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದು, ತಾನು ನಾಮಪತ್ರ ಹಿಂಪಡೆಯಲು ಯಾವದೇ ಸಹಿ ಮಾಡಿಲ್ಲ. ಆದರೂ ನನ್ನ ಸಹಿಯನ್ನು ನಕಲಿ ಮಾಡಿ ಪತ್ರ ಹಿಂಪಡೆಯಲಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಜರುಗಿಸಬೇಕು. ಇದೀಗ ಆಯ್ಕೆಗೊಂಡಿರುವ ಮಂಡಳಿಯನ್ನು ವಜಾಗೊಳಿಸಿ, ನಕಲಿ ಸಹಿ ಮಾಡಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.