ಸುಂಟಿಕೊಪ್ಪ, ಫೆ. 14: ಸುಂಟಿಕೊಪ್ಪ ಸರಕಾರಿ ಕಾಲೇಜಿಗೆ ಆಡಳಿತ ಮಂಡಳಿ ಕೋರಿಕೆ ಮೇರೆಗೆ ದಾನಿಗಳು ಸ್ಪಂದಿಸಿದ್ದು ಸಿಸಿ ಕ್ಯಾಮೆರಾ ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿ ದ್ದಾರೆ.
ಹೆರೂರು ಅಲತ್ತುಮಾಡು ಕಾಫಿ ತೋಟದ ಮಾಲೀಕ ಶಿವು ಮಾದಪ್ಪ ಅವರು ಸಿಸಿ ಕ್ಯಾಮರಾ ಕಾಲೇಜಿಗೆ ಉಚಿತವಾಗಿ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಸುಂಟಿಕೊಪ್ಪ ಕಾಫಿ ಬೆಳೆಗಾರ ಪ್ಲಿಮಲಾ ಗಂಗಾಧರ್ ಒದಗಿಸಿದ್ದಾರೆ. ಕರ್ನಾಟಕ ಬ್ಯಾಂಕ್ ವತಿಯಿಂದ ಕಾಲೇಜಿಗೆ ಶೌಚಾಲಯ ವನ್ನು ನಿರ್ಮಿಸಿಕೊಡಲಾಗಿದೆ. ಪನ್ಯ ತೋಟದ ಮಾಲೀಕ ಎಸ್.ಬಿ. ಜಯರಾಜ್ ಕಾಲೇಜಿಗೆ ಇಂಟರ್‍ನೆಟ್ ಪ್ರಿಂಟರ್ ನೀಡಿದ್ದು, ಕಾಲೇಜಿಗೆ ಗೇಟ್‍ಅನ್ನು ಕೊಡಗರಹಳ್ಳಿ ತೋಟದ ಮಾಲೀಕ ಬಸವರಾಜು ವೆಂಕಟೇಶ್ವರ ಒದಗಿಸಿಕೊಟ್ಟಿದ್ದಾರೆ. ವಿ.ಎಸ್.ಎಸ್.ಎನ್. ಬ್ಯಾಂಕಿನ ಆಡಳಿತ ಮಂಡಳಿಯವರು ಧ್ವಜ ಸ್ತಂಬವನ್ನು ಹಾಗೂ ಗುತ್ತಿಗೆದಾರ ರಾದ ಆನಂದ ಪೂಜಾರಿ ನೋಟಿಸ್ ಬೋರ್ಡ್ ಒದಗಿಸಿಕೊಟ್ಟಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಯಂಕನ ವೈ. ಕರುಂಬಯ್ಯ ತಿಳಿಸಿದರು.
ಕಳೆದ ಗಣರಾಜ್ಯೋತ್ಸವದ ಅಂಗವಾಗಿ ರಾತ್ರಿ ವೇಳೆ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಡ್ಯಾನ್ಸ್ ಮೇಳ ನಡೆಯುತ್ತಿದ್ದ ಸಂದರ್ಭ ಕಿಡಿಗೇಡಿಗಳು ಕಿಟಿಕಿ-ಗಾಜುಗಳನ್ನು ನಾಶಗೊಳಿಸಿ, ಮದ್ಯ ಸೇವಿಸಿ ದುಂಡಾವರ್ತನೆ ಪ್ರದರ್ಶಿಸಿ ಪರಾರಿಯಾಗಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿಯವರು ಕಾಲೇಜಿಗೆ ಗೇಟು, ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಲ್ಲಿ ದಾನಿಗಳ ಸಹಕಾರದಿಂದ ಯಶಸ್ವಿಯಾಗಿದ್ದಾರೆ.
ಈ ಸಂದರ್ಭ ಆಡಳಿತ ಮಂಡಳಿ ಸದಸ್ಯ ರಮೇಶ್ ಪಿಳ್ಳೆ ಹಾಗೂ ದಾನಿ ಗುತ್ತಗೆದಾರ ಆನಂದ ಪೂಜಾರಿ, ಕಾಲೇಜು ಪ್ರಬಾರ ಪ್ರಾಂಶುಪಾಲ ಸೋಮಚಂದ್ರ ಉಪಸ್ಥಿತರಿದ್ದರು.