ಶನಿವಾರಸಂತೆ, ಫೆ. 15: ಮಂಗಳೂರಿನಿಂದ ಕುಶಾಲನಗರದ ಕಡೆಗೆ ಪರವಾನಗಿ ಇಲ್ಲದೆ ಮರಳು ಕಳ್ಳ ಸಾಗಾಣಿಕೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಗುಡುಗಳಲೆ ಬಳಿ 4 ಮರಳು ಲಾರಿ (ಕೆಎ-19, ಎಬಿ-4861), (ಕೆಎ-19, ಎಬಿ-6456) ಕೊಡ್ಲಿಪೇಟೆ ಬಳಿ (ಕೆಎ-19, ಎಬಿ-6455) ಹಾಗೂ (ಕೆಎ-19, ಎಬಿ-3272)ಗಳನ್ನು ವಶಪಡಿಸಿಕೊಂಡು ಚಾಲಕರುಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಬೆಳಗ್ಗಿನ ಜಾವ 2 ಗಂಟೆಗೆ ಮಂಗಳೂರು ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದ ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿ ಪ್ರಶ್ನಿಸಿದಾಗ, ಲಾರಿಯಲ್ಲಿ ಅಡಿಕೆ ಸಿಪ್ಪೆಯ ಮೂಟೆಗಳಿವೆ. ಹೊಗೆಸೊಪ್ಪಿನ ಬ್ಯಾರಲ್ ಮನೆಗೆ ಕೊಂಡೊಯ್ಯ ಲಾಗುತ್ತಿದೆ ಎಂದು ಚಾಲಕರು ಉತ್ತರಿಸಿದರು. ಈ ಸಂದರ್ಭ ಪೊಲೀಸರು ಪರಿಶೀಲಿಸಿದಾಗ ಪ್ರತಿ ಲಾರಿಯ ಒಳಗಡೆ ಸುಮಾರು 40 ಅಡಿಕೆ ಸಿಪ್ಪೆಯ ಚೀಲಗಳಿದ್ದು, ಅಡಿಯಲ್ಲಿ ಮರಳು ತುಂಬಿಸಿ ಮರಳು ಕಳ್ಳ ಸಾಗಾಣೆ ಮಾಡುತ್ತಿರುವದನ್ನು ಪತ್ತೆ ಹಚ್ಚಿದ ಪೊಲೀಸರು ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡು ಲಾರಿ ಚಾಲಕರುಗಳಾದ ಉಪ್ಪಿನಂಗಡಿಯ ಮೊಹಮ್ಮದ್ ಅನಾಸ್ ಹಾಗೂ ಎಲಿಯಾಸ್ ಅವರುಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಇನ್ನೀರ್ವರು ಚಾಲಕರು ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಹಾಯಕ ಠಾಣಾಧಿಕಾರಿ ಬಿ.ಎಸ್. ಜನಾರ್ದನ್, ಸಿಬ್ಬಂದಿಗಳಾದ ಪ್ರದೀಪ್, ಸಫೀರ್, ರವೀಂದ್ರ, ಸಂತೋಷ್, ರಮೇಶ್, ಚನ್ನಕೇಶವ ಸುರೇಶ್, ವಿಶ್ವನಾಥ ಪಾಲ್ಗೊಂಡಿದ್ದರು.