ಮಡಿಕೇರಿ, ಫೆ. 15: ಪ್ರಕೃತಿಯ ನೆಲೆವೀಡಾಗಿ ಸಂಪದ್ಭರಿತವಾಗಿದ್ದ ಕೊಡಗಿನ ಪರಿಸರದ ಮೇಲೆ ಪ್ರತಿನಿತ್ಯ ದೌರ್ಜನ್ಯವಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ. ಪರಿಸರ ಉಳಿದರೆ ಮಾತ್ರ ಕೊಡಗಿಗೆ ಉಳಿಗಾಲವಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ತಾಣವಾಗಿ ಘೋಷಣೆ ಮಾಡಬೇಕೆಂದು ಕೊಡಗು ವನ್ಯಜೀವಿ ಸಂಘ ಹಾಗೂ ವನ್ಯಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.ಕೊಡಗು ವನ್ಯಜೀವಿ ಸಂಘದ ಕಚೇರಿಯಲ್ಲಿಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಅವರು, ಪ್ರಾತ್ಯಕ್ಷಿಕೆ ಸಹಿತ ಕೊಡಗಿನ ಪರಿಸರ, ಜಲ, ವನ್ಯ ಪ್ರಾಣಿಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ವಿನಾಶವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.ಕೊಡಗಿನ ಪ್ರಕೃತಿ ಸೌಂದರ್ಯವೂ ಅರಣ್ಯ, ಕಾಫಿ ತೋಟ, ಭತ್ತದ ಗದ್ದೆಗಳು, ಪವಿತ್ರ ವೃಕ್ಷಗಳು, ನದಿಗಳು ಹಾಗೂ ತೊರೆಗಳಿಂದ ಪ್ರಭಾವಿತವಾಗಿದೆ. ಕೊಡವ, ಗೌಡ, ಹೆಗ್ಗಡೆ, ಐರಿ, ಎರವ, ಕುರುಬ, ಕುಡಿಯ ಮುಂತಾದ ಮೂಲನಿವಾಸಿಗಳ ಸಮಾಜಗಳ ನಿವಾಸ ಸ್ಥಾನವಾಗಿದೆ. ಜಿಂಕೆ, ಕರಡಿ, ಹುಲಿ, ಆನೆ ಮೊದಲಾದ ಕಾಡು ಪ್ರಾಣಿಗಳು ಇಲ್ಲಿವೆ. ಈ ಪ್ರಾಣಿ ಸಂಕುಲವು ಅರಣ್ಯ ನಾಶದೊಂದಿಗೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಸ್ಥಳೀಯ ಮೂಲ ನಿವಾಸಿಗಳು ಕೂಡ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ. ಇಲ್ಲಿನ ಪ್ರತಿ ಸಮಾಜಗಳೂ ಬಹಳ ಕಡಿಮೆ ಸಂಖ್ಯೆಯಲ್ಲಿರುವದರಿಂದ ತಮ್ಮ ಅಸ್ತಿತ್ವವನ್ನು ಕೊಡಗಿನ ರಮ್ಯ ನೋಟ ನಾಶವಾಗುವದರ ಮೂಲಕ ಕಳೆದುಕೊಳ್ಳಲಿದೆ. ಇಲ್ಲಿನ ಮೂಲನಿವಾಸಿಗಳಿಗೆ ಕೊಡಗು ಮಾತ್ರ ವಾಸಸ್ಥಾನವಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಭಾರತದಲ್ಲಿ ಪ್ರಾಮುಖ್ಯತೆ

ಕೊಡಗು ಜೀವನದಿ ಕಾವೇರಿಯ ಉಗಮ ಸ್ಥಾನವಾಗಿದೆ. ಶೇ. 70ಕ್ಕಿಂತಲೂ ಹೆಚ್ಚು ನೀರು ಕೆ.ಆರ್.ಎಸ್. ಸೇರುತ್ತಿರುವದು ಕೊಡಗಿನಿಂದ. ಇವುಗಳು ಅರಣ್ಯಗಳಿಂದ, ಕಾಫಿ ತೋಟಗಳಿಂದ ಹಾಗೂ ಭತ್ತದ ಗದ್ದೆಗಳಿಂದ ಹರಿದುಬರುತ್ತದೆ. ಇಡೀ ದ.ಭಾರತಕ್ಕೆ ಆಹಾರ, ನೀರು ಹಾಗೂ ಆರ್ಥಿಕ ಭದ್ರತೆಯನ್ನು ಕಾವೇರಿ ನದಿ ನೀಡುತ್ತಿದೆ. ಎಂಟುಕೋಟಿ ಜನರಿಗೆ ಹಾಗೂ ಆರುನೂರು ಕೈಗಾರಿಕೆಗಳಿಗೆ ನೀರು ಒದಗಿಸುತ್ತಿದೆ. ಹಾಗಾಗಿ ಕೊಡಗು ಇಡೀ ರಾಷ್ಟ್ರದ ಪ್ರಮುಖ ಜಿಲ್ಲೆ ಎಂದು ಅರ್ಥೈಸಬಹುದಾಗಿದೆ ಎಂದರು.

(ಮೊದಲ ಪುಟದಿಂದ)

ನಗರೀಕರಣದಿಂದ ತೊಂದರೆ

ನಾವು ಪಡೆದುಕೊಂಡಿರುವ ಮಾಹಿತಿ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ 2800 ಎಕರೆಯಷ್ಟು ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆಯಾಗಿದೆ. ಕೊಡಗಿನ ನಗರಗಳು ಹಾಗೂ ಪಟ್ಟಣಗಳು ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಹೊಸ ವಸತಿ ಬಡಾವಣೆಗಳು ಎರಡು ಪಟ್ಟಣಗಳ ನಡುವೆ ನಿರ್ಮಿತವಾಗುತ್ತಿವೆ. ಇದರಿಂದ ಪಟ್ಟಣಗಳು ಪರಸ್ಪರ ಸೇರ್ಪಡೆಯಾಗಿ ದೊಡ್ಡ ಪಟ್ಟಣವಾಗುತ್ತಿವೆ. ಮಡಿಕೇರಿಯ ಸಿ.ಡಿ.ಪಿ.ಯನ್ನು ಮೇಕೇರಿವರೆಗೆ ಸಾಕಷ್ಟು ಸಂದರ್ಭಗಳಲ್ಲಿ ವಿರೋಧವಿದ್ದರೂ ಸಹ ಅನುಮತಿ ನೀಡಲಾಗಿದೆ. ವಿಪರ್ಯಾಸವೆಂದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಂದಾಗಲೀ ಅಥವಾ ಇತರ ಅಧಿಕಾರಿಗಳಿಂದಾಗಲಿ ಅನುಮತಿಯನ್ನು ಪಡೆಯದೇ ವಸತಿ ಬಡಾವಣೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಭೂ ಪರಿವರ್ತನೆ, ವಸತಿ ಬಡಾವಣೆ ನಿರ್ಮಾಣ ಹಾಗೂ ನಿವೇಶನಗಳ ಮಾರಾಟವನ್ನು ನಿಲ್ಲಿಸಲು ಈ ಮೂಲಕ ಮನವಿ ಮಾಡುತ್ತೇವೆ. ಈಗ ಇರುವ ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗದೇ ಇರುವಾಗ ಹೆಚ್ಚಿನ ಜನಸಂಖ್ಯೆಗೆ ನೀರು ಒದಗಿಸುವದು ಅಸಾಧ್ಯ. ಇಲ್ಲಿನ ನೆಲ ಇಲ್ಲಿನ ಜನರಿಗೆ ಮಾತ್ರ ವಸತಿ ಒದಗಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೀಸಲಿಡಬೇಕೇ ಹೊರತು, ಹೊರಗಿನವರು ಕೊಡಗಿಗೆ ಬಂದು ತಮ್ಮ ನೆಲೆ ಸ್ಥಾನವನ್ನಾಗಿ ಮಾಡಲು ಅವಕಾಶ ನೀಡಬಾರದೆಂದು ಆಗ್ರಹಿಸಿದರು.

ಪ್ರವಾಸೋದ್ಯಮ ಬೇಡ

ಪ್ರವಾಸೋದ್ಯಮ ಕೊಡಗಿಗೆ ಒಂದು ಶಾಪವಾಗಿದೆ. ಕೊಡಗಿನ ಸೌಂದರ್ಯದ ಅವನತಿಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಲಂಗು ಲಗಾಮಿಲ್ಲದ ಪ್ರವಾಸೋದ್ಯಮವಾಗಿದೆ. ಕೊಡಗಿನಲ್ಲಿ ಕೇವಲ 5.5 ಲಕ್ಷ ಜನಸಂಖ್ಯೆ ಇದ್ದರೆ ಇಲ್ಲಿಗೆ ಕಳೆದ ಸಾಲಿನಲ್ಲಿ 13 ಲಕ್ಷ ಪ್ರವಾಸಿಗರು ಬಂದಿದ್ದಾರೆ. ಈ ವಿಚಾರವನ್ನು ಪ್ರವಾಸೋದ್ಯಮ ಸಚಿವರ ಜತೆ ಚರ್ಚಿಸಲಿದ್ದೇವೆ. ಹೊಸದಾಗಿ ಘಟಕಗಳನ್ನು ತೆರೆಯದಂತೆ ಇಲ್ಲಿನ ಎಲ್ಲಾ ದೊಡ್ಡ ರೆಸಾರ್ಟ್‍ಗಳಲ್ಲಿ ವಿನಂತಿಮಾಡಿಕೊಳ್ಳುವದಾಗಿ ಹೇಳಿದರು.

ಜಿಲ್ಲಾಡಳಿತ ಕೊಳವೆ ಬಾವಿಗಳನ್ನು ತೋಡುವದು ಮತ್ತು ಹೊಳೆಯಿಂದ ನೀರು ಎತ್ತುವದನ್ನು ನಿಷೇಧಿಸಿದೆ. ಇದೇ ರೀತಿ ಮಂಡ್ಯದ ರೈತರಿಗೆ ಕಾವೇರಿ ನಾಲೆಗಳ ಮೂಲಕ ನೀರು ಹರಿಸುವದನ್ನು ನಿಷೇಧಿಸಿದೆಯೇ ಎಂದು ಪ್ರಶ್ನಿಸಿದ ಅವರು ಕೊಡಗಿನ ಎಲ್ಲಾ ರೆಸಾರ್ಟ್‍ಗಳನ್ನು ಬೇಸಿಗೆಯಲ್ಲಿ ಮುಚ್ಚುವಂತೆ ಜಿಲ್ಲಾ ಆಡಳಿತ ಆದೇಶಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಕೆಲವು ರೆಸಾರ್ಟ್‍ಗಳು ಹಲವು ನದಿಗಳ ಸ್ವಾಭಾವಿಕ ಹರಿವಿಗೆ ತಡೆಯೊಡ್ಡಿವೆ. ಆತಿಥ್ಯವನ್ನು ನೀಡುವಂತಹ ಇತರ ಕಂಪೆನಿಗಳು ಕೊಡಗಿನಲ್ಲಿ ವ್ಯವಹಾರ ಆರಂಭಿಸುವದನ್ನು ನಿಲ್ಲಿಸಬೇಕಾಗಿ ಒತ್ತಾಯಿಸಿದರು.

ಹೋಂ ಸ್ಟೇಗಳಿಗೆ ಅನುಮತಿ ಬೇಡ

ಹೊಸದಾಗಿ ಹೋಂ ಸ್ಟೇಗಳಿಗೆ ಅನುಮತಿ ನೀಡಬಾರದು. ಈಗ ಅಸ್ತಿತ್ವದಲ್ಲಿರುವ ಹೋಂ ಸ್ಟೇಗಳು ಬೇಸಿಗೆಯಲ್ಲಿ ಮುಚ್ಚಿರುವಂತೆ ಕ್ರಮ ಕೈಗೊಳ್ಳಬೇಕು. ಬೇಸಿಗೆಯಲ್ಲಿ ದೀರ್ಘಾವಧಿವರೆಗೆ ಮುಚ್ಚಿರುವದು ಒಳ್ಳೆಯದು. ಪ್ರವಾಸೋದ್ಯಮದಿಂದ ವಾಹನ ದಟ್ಟಣೆ, ಕಸದ ಶೇಖರಣೆ, ಬೆಲೆ ಏರಿಕೆ, ನೀರಿಗಾಗಿ ಒತ್ತಡ ಹಾಗೂ ರೆಸಾರ್ಟ್‍ಗಳಿಗಾಗಿ ಭೂ ಪರಿವರ್ತನೆಯಂತಹ ಪರಿಣಾಮ ಎದುರಾಗುತ್ತಿದೆ ಎಂದು ಹೇಳಿದರು.

ಮರಗಳ ನಾಶ

ಮೈಸೂರು - ಕೋಝಿಕೋಡ್ 400 ಕೆ.ವಿ. ವಿದ್ಯುತ್‍ಲೈನ್ ನಿರ್ಮಾಣದಿಂದಾಗಿ 54000 ಮರಗಳ ಮಾರಣ ಹೋಮ ಆಯಿತು. ಕರಿಕೆಯ ಜಲ ವಿದ್ಯುತ್ ಯೋಜನೆಯೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಮರಗಳ ಮಾರಣಹೋಮಕ್ಕೆ ಕಾರಣವಾಯಿತು. ಮುಂದೆ ರೈಲ್ವೆ ಮಾರ್ಗ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಕೊಂಗಣ ಹೊಳೆ ಯೋಜನೆಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಕೊಡಗಿನ ಅರಣ್ಯ ಸಂಪತ್ತು ನಾಶವಾಗಲಿದೆ. ಇದರಿಂದ ನೆರೆ ರಾಜ್ಯಗಳು ಲಾಭ ಪಡೆಯುತ್ತವೆ ಎಂದು ಆರೋಪಿಸಿದರು.

ಕೊಡಗಿನ ಮೂಲಕ ಎರಡು ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈಸೂರು - ಕುಶಾಲನಗರ- ಮಕ್ಕಂದೂರು ಮಾರ್ಗ ಹಾಗೂ ದಕ್ಷಿಣ ಭಾಗವನ್ನು ಕೇರಳದ ವಯನಾಡನ್ನು ವೀರಾಜಪೇಟೆ ಮೂಲಕ ಸಂಪರ್ಕಗೊಳಿಸುವದು. ಈ ಎರಡೂ ಯೋಜನೆಗಳು ಕೊಡಗಿಗೆ ಮಾರಕವಾಗಲಿದೆ. ಇದನ್ನು ನಿಲ್ಲಿಸಬೇಕು. ಒಂದುವೇಳೆ ಮೈಸೂರು - ಕುಶಾಲನಗರ- ರೈಲ್ವೆ ಮಾರ್ಗ ಕುಶಾಲನಗರಕ್ಕೆ ಸೀಮಿತವಾದರೂ ಅದು ಕೊಡಗಿನ ಬಾಗಿಲನ್ನು ತೆರೆದಂತೆ ಆಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಆಗಮಿಸುವ ಅಪಾಯ ಇದೆ. ವಿಶೇಷವಾಗಿ ಅಸ್ಸಾಮಿಗಳೆಂದು ಕರೆಸಿಕೊಳ್ಳುವ ಬಾಂಗ್ಲಾ ದೇಶಿಗರು ಎಗ್ಗಿಲ್ಲದೆ ಕೊಡಗಿನಲ್ಲಿ ನೆಲೆಸಲು ಅವಕಾಶವಾಗುತ್ತದೆ. ಸಂಸದ ಪ್ರತಾಪ್ ಸಿಂಹರ ಅಭಿಪ್ರಾಯದಂತೆ ಹುಣಸೂರು ಮತ್ತು ಪಿರಿಯಾಪಟ್ಟಣದ ಬಹುದಿನಗಳ ಕನಸು ನನಸಾಗಲಿದೆ. ಆದರೆ ವಾಸ್ತವವಾಗಿ ಹುಣಸೂರು ಮತ್ತು ಪಿರಿಯಾಪಟ್ಟಣದ ಜನರು ಬಸ್ ಮಾರ್ಗವಾಗಿ ಕೊಡಗನ್ನು ಸುಲಭವಾಗಿ ತಲಪಬಹುದು. ಈ ಬಗ್ಗೆ ಸಂಸದರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಈಗಿರುವ ರಸ್ತೆಗಳನ್ನು ರಾಷ್ಟ್ರೀಯ ಎರಡು ಪಥಗಳ ಮತ್ತು ನಾಲ್ಕು ಪಥಗಳ ರಸ್ತೆಗಳನ್ನಾಗಿ ಅಗಲೀಕರಿಸುವ ಪ್ರಸ್ತಾವನೆಗಳು ಜಾರಿಯಲ್ಲಿವೆ. ಈಗಿನ ವಾಹನ ಸಂಚಾರ ಸಾಂದ್ರತೆಗೆ ಈ ಪ್ರಸ್ತಾವನೆಗಳ ಅಗತ್ಯ ಇರುವದಿಲ್ಲ. ಯೋಜನೆ ಮೂಲಕ ಹಣ ಗಳಿಸುವ ಹಾಗೂ ಮರದ ಲೂಟಿಗಾಗಿ ಸಂಚು ರೂಪಿಸಲಾಗಿದೆ. ಮಟ್ಟನೂರಿನ ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಕ್ಕಾಗಿ ಹೆದ್ದಾರಿ ನಿರ್ಮಾಣ ಎಂದು ಕಾರಣ ನೀಡಲಾಗಿದೆ. ಇದರಲ್ಲಿ ಯಾವದೇ ತಾತ್ವಿಕ ಸತ್ಯಾಂಶ ಕಾಣುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಈ ಯೋಜನೆಗಳಿಂದ ಟಿಂಬರ್ ಮಾಫಿಯಾಗಳಿಗೆ ಅನುಕೂಲವಾಗಲಿದೆ ಎಂದು ಆರೋಪಿಸಿದರು.

ಮರಳು ಗಣಿಗಾರಿಕೆ

ಕೊಡಗಿನಲ್ಲಿ ಮರಳು ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಕೊಡಗಿನಿಂದ ಹೊರರಾಜ್ಯಗಳಿಗೆ ಸಾಗಣೆಯಾಗುತ್ತಿರುವ ಮರಳಿಗೆ ಕಡಿವಾಣ ಹಾಕಬೇಕಾಗಿದೆ. ಮರಳುಗಾರಿಕೆಯಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುವ ಲಕ್ಷ್ಮಣತೀರ್ಥ ಹೊಳೆಯನ್ನು ನೋಡಿದಾಗ ವ್ಯಸನವಾಗುತ್ತದೆ. ಇದರ ಪರಿಣಾಮವಾಗಿ ಸ್ಥಳೀಯರು ತಮ್ಮ ಅವಶ್ಯಕತೆಗಾಗಿ ಮರಳು ಪಡೆಯಲು ದುಬಾರಿ ಬೆಲೆ ತೆರಬೇಕಾಗಿದೆ.

ಮಾಧವ ಗಾಡ್ಗೀಳ್ ವರದಿ

2011ರ ಸಾಲಿನಲ್ಲಿ ಪ್ರೊ. ಮಾಧವ ಗಾಡ್ಗೀಳರ ನೇತೃತ್ವದಲ್ಲಿ ರಚನೆಯಾದ ಪಶ್ಚಿಮ ಘಟ್ಟ ಪರಿಸರ ಶಾಸ್ತ್ರ ಪರಿಣಿತರ ಸಮಿತಿಯು ಕೊಡಗಿನ ಮೂರೂ ತಾಲೂಕುಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲು ಶಿಫಾರಸು ಮಾಡಿತು. ಈ ಶಿಫಾರಸನ್ನು ಪರಿಶೀಲಿಸಿ ವರದಿ ತಯಾರಿಸಲು ಸರಕಾರವು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಿತು. ಆ ಸಂದರ್ಭದಲ್ಲಿ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘವು ಕಸ್ತೂರಿ ರಂಗನ್ ಸಮಿತಿಗೆ ಕೆಲವು ಶಿಫಾರಸುಗಳನ್ನು ಮಾಡಿತು. ಇದರ ಪರಿಣಾಮವಾಗಿ ಕಸ್ತೂರಿ ರಂಗನ್ ಸಮಿತಿಯು ಮಾಧವ ಗಾಡ್ಗೀಳ್ ಶಿಫಾರಸಿಗೆ ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೆ ತರುವಂತೆ ಸೂಚಿಸಿತು. 2013 ಮಾರ್ಚ್ ತಿಂಗಳಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ್ದೆವು. ನಮ್ಮ ರಾಜಕಾರಣಿಗಳು ಮಾಧವ ಗಾಡ್ಗೀಳ್ ವರದಿಗೆ ಸ್ಪಂದಿಸಿ ಕೆಲವು ಷರತ್ತುಗಳೊಡನೆ ಒಪ್ಪಿಕೊಂಡಿದ್ದರೆ ಇಂದು ನಾವು ಪ್ರಸಕ್ತ ಭಯಾನಕ ಪರಿಸ್ಥಿತಿಯಲ್ಲಿ ಇರಬೇಕಾಗಿಲ್ಲ. ವಿದ್ಯುತ್ ಮಾರ್ಗ, ಕೊಂಗಣ ಯೋಜನೆ ಹಾಗೂ ರೈಲ್ವೆ ಮಾರ್ಗ ಯೋಜನೆಗಳನ್ನು ತಪ್ಪಿಸಬಹುದಿತ್ತು. ಆದರೆ ಜನಪ್ರತಿನಿಧಿಗಳು ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ಜನರನ್ನು ಪ್ರಚೋದಿಸಿದರು ಎಂದು ಆಪಾದಿಸಿದರು.

ನಾಶಗೊಳಿಸಲು ಹಣ

ಕೊಡಗಿನ ಮೂಲಕ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳು, ರೆಸಾರ್ಟ್‍ಗಳಿಗೆ ನೀಡುವ ಸಹಾಯಧನ, ನಾಪೋಕ್ಲು ಸಮೀಪ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿಗೆ ಒಂದು ವೇಳೆ ಮೂರು ಸಾವಿರ ಕೋಟಿ ರೂ. ಖರ್ಚಾಗಲಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಕೊಡಗಿನ ವಿನಾಶಕ್ಕೆ, ಇಲ್ಲಿನ ಮೂಲ ನಿವಾಸಿಗಳನ್ನು ಮೂಲೆಗುಂಪು ಮಾಡಲು ಹಾಗೂ ಕಾವೇರಿ ನದಿಯ ಅನಘ್ರ್ಯ ಹರಿವನ್ನು ತಗ್ಗಿಸುವ ಕಾರ್ಯಕ್ಕೆ ಒದಗಿ ಬರಲಿದೆ. ಅದೇ ವೇಳೆ ಆನೆ - ಮಾನವ ಸಂಘರ್ಷವನ್ನು ಕಡಿಮೆ ಮಾಡುವ, ಪರಿಸರಪೂರಕ ಪ್ರವಾಸಿ ಕೇಂದ್ರದ ಸ್ಥಾಪನೆ ಮಾಡುವ, ಕೊಡಗಿನ ಅರಣ್ಯ ಸಂಪತ್ತನ್ನು ಉಳಿಸುವ ಹಾಗೂ ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಕಾಪಾಡಲು ಇಲ್ಲಿನ ನಿವಾಸಿಗಳಿಗೆ ಆರ್ಥಿಕ ಭದ್ರತೆ ಒದಗಿಸಲು ಯಾವದೇ ರೀತಿಯ ಹಣ ನೀಡುತ್ತಿಲ್ಲ. ಇದಕ್ಕಾಗಿ ನಾವು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು.

ಕೇರಳೀಯರ ಪ್ರಭಾವ

ಕೇರಳದ ಜನರು ಹಲವು ದಶಕಗಳಿಂದ ವೃದ್ಧಿ ಹೊಂದುತ್ತಿದ್ದಾರೆ. ರಾಜಕೀಯದಲ್ಲಿ ಕೂಡ ಪ್ರಾಬಲ್ಯ ಹೊಂದಿದ್ದಾರೆ. ಗ್ರಾ.ಪಂ. ಮಟ್ಟದಿಂದ ರಾಜ್ಯ ಸಚಿವ ಸಂಪುಟದವರೆಗೆ ಈ ಪ್ರಾಬಲ್ಯ ವಿಸ್ತರಿಸಿದೆ. ಕಾಫಿ ಮತ್ತು ಕರಿಮೆಣಸಿನ ವ್ಯಾಪಾರ ಇವರ ಕಪಿಮುಷ್ಠಿಯಲ್ಲಿದೆ. ಕೊಡಗು ಕೇರಳದ ನದಿಗಳಿಗೆ ಸಹ ನೀರುಣಿಸುವ ಪ್ರದೇಶವಾಗಿದೆ. ಕೇರಳಕ್ಕಿಂತ ಉತ್ತಮ ಪ್ರದೇಶ ಎಂಬ ಕಾರಣಕ್ಕೆ ಕೇರಳದವರು ಕೊಡಗಿಗೆ ಬರುತ್ತಾರೆ. ಆದರೆ ಕೊಡಗನ್ನು ಸಹ ಕೇರಳದಂತೆಯೇ ಮಾಡಿದರೆ ಕೇರಳಕ್ಕೂ ಕೊಡಗಿಗೂ ವ್ಯತ್ಯಾಸವೇನು ಬಂತು?

ಕೊಂಗಣ ಹೊಳೆ ಯೋಜನೆ

ಹುಣಸೂರಿಗೆ ಸಾಕಷ್ಟು ನೀರು ಸಿಗದ ಕಾರಣ ಲಕ್ಷ್ಮಣತೀರ್ಥ ಹೊಳೆಗೆ ನೀರು ಹರಿಸಲು ಕೊಂಗಣ ಹೊಳೆ ಯೋಜನೆ ರೂಪಿತವಾಗಿದೆ. ಲಕ್ಷ್ಮಣತೀರ್ಥ ನದಿಯಲ್ಲಿದ್ದ ಮರಳನ್ನು ಸಂಪೂರ್ಣ ನಾಶ ಮಾಡಿ ನದಿ ಸರ್ವನಾಶವಾಗುವಂತೆ ಮಾಡಿದ್ದರಿಂದ ಅದರಲ್ಲಿ ನೀರು ಹರಿಯುತ್ತಿಲ್ಲ. ಹಸಿರು ವಲಯದ ನಾಶದಿಂದಾಗಿ ಆನೆ - ಮಾನವ ಸಂಘರ್ಷ ನಡೆಯುತ್ತಿದೆ. ಹಾಗೂ ಮಳೆ ಪ್ರಮಾಣ ಕಡಿಮೆಯಾಗಿದೆ. ಮುಂದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಣೆಕಟ್ಟುಗಳ ನಿರ್ಮಾಣಕ್ಕೆ ಬೇಡಿಕೆ ಬರಬಹುದು.

ಕೊಡಗು ಸಂಪೂರ್ಣ ನಿರ್ನಾಮವಾಗುವವರೆಗೆ ಕೊಡಗಿನ ನೆಲದ ಮೇಲೆ ಆಕ್ರಮಣ ನಡೆಯುತ್ತಲೇ ಇರುತ್ತದೆ. ಇದಕ್ಕೆಲ್ಲಾ ಪರಿಹಾರವೆಂದರೆ ಕಾನೂನಾತ್ಮಕವಾಗಿ ಕೊಡಗಿನ ರಕ್ಷಣೆಗಾಗಿ ಇರುವ ಏಕೈಕ ಮಾರ್ಗವೆಂದರೆ ಇಡೀ ಕೊಡಗು ಜಿಲ್ಲೆಯನ್ನು ಅತಿಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸುವದೇ ಆಗಿದೆ. ಪರಿಸರ ಸಂರಕ್ಷಣಾ ಕಾಯ್ದೆ ಮೂಲಕ ಇದನ್ನು ಮಾಡಬಹುದು. ಕೊಡಗಿನ ರಕ್ಷಣೆಗೆ ಅನ್ಯಥಾ ಬೇರೆ ಮಾರ್ಗವಿಲ್ಲ.

ಹೊರಗಿನವರಿಗೆ ಆಶ್ರಯ ಬೇಡ

ಬಸವಣ್ಣ ದೇವರಬನ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ನಂಜಪ್ಪ ಮಾತನಾಡಿ, ಜಿಲ್ಲೆಯ ಕೆಲವು ಹಾಡಿಗಳ ಸನಿಹದಲ್ಲಿರುವ ಅರಣ್ಯ ಒತ್ತುವರಿಯಾಗಿದೆ. ದಿಡ್ಡಳ್ಳಿಯ ಪ್ರಕರಣ ಕೂಡ ಇದಕ್ಕೆ ಸಾಕ್ಷಿಯಾಗಿದೆ. ಕೊಡಗಿನಲ್ಲಿರುವ ಅರ್ಹ ಗಿರಿಜನರಿಗೆ ನಿವೇಶನ ನೀಡಲು ಸರಕಾರ ಮುಂದಾಗಿದ್ದರೂ ಕೆಲವರ ತಂತ್ರಗಾರಿಕೆಯಿಂದಾಗಿ ಪಡೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಎಲ್ಲಿಂದಲೋ ಬಂದ ನಿರಾಶ್ರಿತರಿಗೆ ಕೊಡಗಿನಲ್ಲಿ ನೆಲೆ ಕಲ್ಪಿಸುವದು ಬೇಡವೆಂದು ಆಗ್ರಹಿಸಿದರು.

ದಿಡ್ಡಳ್ಳಿಯಲ್ಲಿ ನಕ್ಸಲರ ಪ್ರಭಾವ ಯಾವ ರೀತಿ ಕೆಲಸ ಮಾಡುತ್ತಿದೆಯೆಂದು ಎಲ್ಲರಿಗೂ ಅರ್ಥವಾಗಿದೆ. ದಿಡ್ಡಳ್ಳಿಯಲ್ಲಿ ಅಕ್ರಮವಾಗಿ ಕುಳಿತಿರುವವರನ್ನು ಜಿಲ್ಲಾಡಳಿತ ಓಡಿಸಬೇಕು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇಂತಹವರಿಗೆ ಬೆಂಬಲ ನೀಡಿರುವದು ಅವರ ಘನತೆಗೆ ತಕ್ಕುದಲ್ಲ. ಅವರಿಗಿಂತ ಉತ್ತಮ ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿದ್ದರು. ದೊರೆಸ್ವಾಮಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವದು ಸರಿಯಲ್ಲ. ಅವರ ವರ್ತನೆಗೆ ಧಿಕ್ಕಾರವಿದೆ. ಅವರು ರಾಜ್ಯದ 8 ಕೋಟಿ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಹೇಳಿದರು. ಇಂತಹ ಹೋರಾಟಗಳಿಗೆ ಯಾರೂ ಕೂಡ ಬೆಂಬಲ ನೀಡಬಾರದೆಂದು ಹೇಳಿದರು.

ಈ ಸಂದರ್ಭ ಬೆಳೆಗಾರರ ಸಂಘದ ಕೈಬುಲಿರ ಹರೀಶ್, ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೋಟ್ರಮಾಡ ಅರುಣ, ರೈತ ಸಂಘದ ಅರುಣ್ ಚಂಗಪ್ಪ, ಮೈಸೂರು ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್‍ನ ಜಯಕುಮಾರ್, ಮೈಸೂರು ಕೊಡವ ಒಕ್ಕೂಟದ ಗಣೇಶ್ ಅಯ್ಯಣ್ಣ, ವನ್ಯಜೀವಿ ಸಂಘದ ಸದಸ್ಯರುಗಳು, ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು.