ಸೋಮವಾರಪೇಟೆ, ಫೆ. 15: ಅಸಂಖ್ಯಾತ ಕ್ರೀಡಾ ಪ್ರತಿಭೆಗಳಿರುವ ಭಾರತದಲ್ಲಿ ಕ್ರೀಡಾಕೂಟಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕು. ಒಲಂಪಿಕ್ಸ್ ಕ್ರೀಡೆಯಲ್ಲಿ ಭಾರತ ಇನ್ನಷ್ಟು ಸಾಧನೆ ತೋರಲು ದೇಶದ ಶಾಲಾ ಕಾಲೇಜುಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರು ಇನ್ನಷ್ಟು ಕ್ರಿಯಾಶೀಲರಾಗ ಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಬುನಾಥ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಇಲ್ಲಿನ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಎರಡನೇ ವರ್ಷದ ಹೊನಲುಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಧ್ವಜದ ಮೂಲಕ ಹಾರಿಸುವ ಕ್ರೀಡಾಪ್ರತಿಭೆಗಳಿಗೆ ಸ್ಥಳೀಯವಾಗಿ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಅಗತ್ಯ ಸಹಕಾರ ದೊರೆತರೆ ಕ್ರೀಡಾಳುಗಳು ಇನ್ನಷ್ಟು ಸಾಧನೆ ತೋರಲು ಸಾಧ್ಯ ಎಂದರು.

ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದಾನಿಗಳಾದ ಹರಪಳ್ಳಿ ರವೀಂದ್ರ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿ ಯೇಷನ್‍ನ ಅಧ್ಯಕ್ಷ ಎಚ್.ಎಸ್. ಉತ್ತಪ್ಪ, ಒಕ್ಕಲಿಗ ಬ್ರಿಗೇಡ್ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ, ಪ್ರಮುಖರಾದ ಎಸ್.ಬಿ. ಭರತ್‍ಕುಮಾರ್, ಬಿ.ಬಿ. ಭಾರತೀಶ್, ನಾಪಂಡ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.