ಸೋಮವಾರಪೇಟೆ, ಫೆ. 15: ಸಂಘಟಿತ ಹೋರಾಟ, ಚಾಕಚಕ್ಯತೆಯ ಧಾಳಿ, ಅಮಿತೋತ್ಸಾಹದೊಂದಿಗೆ ಮೈದಾನದಲ್ಲಿ ಮಿಂಚಿದ ಪ್ರೋ ಕಬಡ್ಡಿಯಲ್ಲಿ ಭಾಗವಹಿಸಿದ್ದ ಆಟಗಾರರನ್ನು ಒಳಗೊಂಡ ಬಲಿಷ್ಠ ವಿಜಯ ಬ್ಯಾಂಕ್ ತಂಡ, ಪ್ರತಿಷ್ಠಿತ ಒಕ್ಕಲಿಗ ಕಪ್ ಕಬಡ್ಡಿ ಕಪ್ನ್ನು ತನ್ನ ಮುಡಿಗೇರಿಸಿಕೊಂಡಿತು.ಸಾವಿರಾರು ಕಬಡ್ಡಿ ಪ್ರೇಮಿಗಳ ಚಪ್ಪಾಳೆ, ಶಿಳ್ಳೆ, ಪ್ರೋತ್ಸಾಹದ ನಡುವೆ ತಡರಾತ್ರಿ 1ಗಂಟೆಗೆ ನಡೆದ ಫೈನಲ್ ಪಂದ್ಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡವನ್ನು ಮಣಿಸಿ ರೂ. 1ಲಕ್ಷ ನಗದು ಸೇರಿದಂತೆ ಬೃಹತ್ ಟ್ರೋಫಿಗೆ ವಿಜಯ ಬ್ಯಾಂಕ್ ತಂಡ ಮುತ್ತಿಟ್ಟಿತು. ಆರಂಭಿಕ ಹಂತದಲ್ಲಿ ಎಡವಿದರೂ ದ್ವಿತಿಯಾರ್ಧದಲ್ಲಿ ಚೇತರಿಸಿಕೊಂಡ ಸ್ಟೇಟ್ ಬ್ಯಾಂಕ್ ತಂಡ ಸಮಬಲ ಸಾಧಿಸಿತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಹಿಂದಡಿಯಿಟ್ಟ ಪರಿಣಾಮ 60 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನದ ಟ್ರೋಫಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಪ್ರತಿಷ್ಠಿತ ಒಕ್ಕಲಿಗರ ಕಪ್ನ್ನು ತಮ್ಮದಾಗಿಸಿಕೊಳ್ಳಲು ಪ್ರತಿಷ್ಠಿತ ತಂಡಗಳು ಭಾರೀ ಪೈಪೋಟಿ ನಡೆಸಿದವು. ಅಂತಿಮವಾಗಿ ವಿಜಯ ಬ್ಯಾಂಕ್ ತಂಡ ಪ್ರಥಮ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ದ್ವಿತೀಯ, ಆರ್.ಎಫ್.ಡಬ್ಲ್ಯು. ಮತ್ತು ಕಸ್ಟಮ್ಸ್ ಅಂಡ್ ಸೆಟ್ರಲ್ ಎಕ್ಸೈಜ್ ತಂಡಗಳು ಮೂರನೇ ಸ್ಥಾನ ಗಳಿಸಿದವು.
ವಿಜೇತ ತಂಡ 1ಲಕ್ಷ ರೂ. ನಗದು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡ 60 ಸಾವಿರ ರೂ. ನಗದು ಆಕರ್ಷಕ ಟ್ರೋಫಿ, ಮೂರನೇ ಸ್ಥಾನ ಪಡೆದ ತಂಡಗಳು ಟ್ರೋಫಿಯೊಂದಿಗೆ ತಲಾ 30 ಸಾವಿರ ನಗದು ಗಳಿಸಿದವು. ಪ್ರಥಮ ಸೆಮಿಫೈನಲ್ನಲ್ಲಿ ವಿಜಯ ಬ್ಯಾಂಕ್ ತಂಡ ಕಸ್ಟಮ್ಸ್ ಅಂಡ್ ಸೆಟ್ರಲ್ ಎಕ್ಸೈಜ್ ತಂಡವನ್ನು ಮಣಿಸಿತು. ದ್ವಿತೀಯ ಸೆಮೀಸ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡ ಆರ್.ಎಫ್. ಡಬ್ಲ್ಯು. ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಒಕ್ಕಲಿಗರ ಯುವ ವೇದಿಕೆಯಿಂದ ಆಯೋಜಿಸಲಾಗಿದ್ದ 2ನೇ ವರ್ಷದ ಹೊನಲುಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ವೀಕ್ಷಿಸಲು ತಡರಾತ್ರಿಯವರೆಗೂ ಸಾವಿರಾರು ಕ್ರೀಡಾಭಿಮಾನಿಗಳು ಕಾಯ್ದುಕುಳಿತಿದ್ದರು. ರಾತ್ರಿ 1 ಗಂಟೆಗೆ ಪ್ರಾರಂಭವಾದ ರೋಚಕ ಫೈನಲ್ ಪಂದ್ಯಾಟದಲ್ಲಿ ವಿಜೇತ ತಂಡ 17 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು. ಪ್ರೋ ಕಬಡ್ಡಿಯ ಅನುಭವಿ ಹಾಗೂ ಬಲಿಷ್ಠ ಆಟಗಾರರಾದ
(ಮೊದಲ ಪುಟದಿಂದ) ರೋಹಿತ್ ಮಾರ್ಲ, ಸುಕೇಶ್ ಹೆಗ್ಡೆ, ಪ್ರಶಾಂತ್ ರೈ, ಸಚಿನ್ ಇವರುಗಳ ಸರ್ವ ಶ್ರೇಷ್ಠ ಆಟದಿಂದ ಆತಂಕವಿಲ್ಲದೆ ಗೆಲುವಿನ ದಡ ಸೇರಿದರು.
ಮೊದಲಾರ್ಧದಲ್ಲಿ ವಿಜೇತ ತಂಡ 16 ಅಂಕಗಳನ್ನು ಪಡೆದರೆ ಎಸ್.ಬಿ.ಎಂ. 14 ಅಂಕಗಳನ್ನು ಪಡೆದು ಸಮಬಲದ ಪ್ರದರ್ಶನ ನೀಡಿತು. ದ್ವಿತೀಯಾರ್ಧದಲ್ಲಿ ವಿಜಯ ಬ್ಯಾಂಕ್ 21 ಅಂಕಗಳನ್ನು ಪಡೆದರೇ ಎಸ್.ಬಿ.ಎಂ. ಕೇವಲ 2 ಅಂಕಗಳನ್ನು ಪಡೆಯಲು ಸಾಧ್ಯವಾಯಿತು.
ಮೊದಲು ಕ್ವಾಟರ್ ಫೈನಲ್ನಲ್ಲಿ ಬೆಂಗಳೂರು ಆರ್. ಡಬ್ಲ್ಯು.ಎಫ್., ಬೆಂಗಳೂರಿನ ಬಿ.ವೈ.ಎಸ್. ವಿರುದ್ದ 7 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿ ಸೆಮಿ ಫೈನಲ್ಗೆ ಅರ್ಹತೆ ಪಡೆಯಿತು. ಎರಡನೇ ಕ್ವಾಟರ್ ಫೈನಲ್ನಲ್ಲಿ ಬೆಂಗಳೂರು ಎಚ್.ಎ.ಎಲ್. ತಂಡದ ವಿರುದ್ಧ ಸೆಂಟರ್ ಎಕ್ಸೈಜ್ ತಂಡ ಕೇವಲ 4 ಅಂಕಗಳ ಜಯಗಳಿಸಿ ಸೆಮಿಫೈನಲ್ಗೆ ಅರ್ಹತೆ ಪಡೆಯಿತು.
ಮೊದಲ ಸೆಮಿಫೈನಲ್ನಲ್ಲಿ ಎಸ್.ಬಿ.ಎಂ. ತಂಡ ಸೆಂಟ್ರಲ್ ಎಕ್ಸೈಜ್ ತಂಡದ ವಿರುದ್ಧ 10 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ವಿಜೇತ ತಂಡ 29 ಅಂಕಗಳಿಸಿದರೆ ಎಕ್ಸೈಜ್ ತಂಡ 19 ಅಂಕಗಳನ್ನು ಗಳಿಸಿತು. ಎರಡನೇ ಸೆಮಿಫೈನಲ್ನಲ್ಲಿ ವಿಜಯ ಬ್ಯಾಂಕ್ 36 ಅಂಕಗಳನ್ನು ಗಳಿಸಿದರೆ ಆರ್.ಎಫ್, ಡಬ್ಲ್ಯು. 20 ಅಂಕಗಳನ್ನು ಗಳಿಸಿ 16 ಅಂಕಗಳ ಅಂತರದಲ್ಲಿ ಸೋಲು ಕಂಡಿತು.
ತಾ. 13ರ ರಾತ್ರಿ ನಡೆದ ಪಂದ್ಯಾಟದಲ್ಲಿ ಬಲಿಷ್ಠ ಐದು ತಂಡಗಳು ಗೆಲುವು ಸಾಧಿಸಿ, ಮುಂದಿನ ಸುತ್ತಿಗೆ ಪ್ರವೇಶಿಸಿದ್ದವು. ವೈ.ಎಫ್.ಎ. ಬೆಂಗಳೂರು ಜರಗನಹಳ್ಳಿ, ಆರ್.ಎಫ್.ಡಬ್ಲ್ಯು, ಸೆಂಟ್ರಲ್ ಎಕ್ಸೈಜ್, ಎಚ್.ಎಂ.ಟಿ. ಕಾಲೋನಿ ಬಾಯ್ಸ್ ತಂಡಗಳು ಗೆಲುವು ಸಾಧಿಸಿದ್ದವು. ಪಂದ್ಯಾಟದ ಪ್ರಥಮ ಪಂದ್ಯದಲ್ಲಿ ಜರಗನಹಳ್ಳಿ ತಂಡ ಸೋಮವಾರಪೇಟೆ ಸತ್ಯ ಸ್ಪೋಟ್ಸ್ ಕ್ಲಬ್ ತಂಡದ ವಿರುದ್ಧ 16 ಅಂಕಗಳ ಗೆಲುವು ಸಾಧಿಸಿತ್ತು.
ಎರಡನೇ ಪಂದ್ಯದಲ್ಲಿ ಆರ್.ಡಬ್ಲ್ಯು. ಬೆಂಗಳೂರು, ಕೂರ್ಗ್ ಮಾರುತಿ ತಂಡದ ವಿರುದ್ಧ 27 ಅಂಕಗಳ ಅಂತರದಲ್ಲಿ ಗೆಲುವು ಪಡೆಯಿತು. ಮೂರನೇ ಪಂದ್ಯದಲ್ಲಿ ಸೆಂಟ್ರಲ್ ಎಕ್ಸೈಜ್ ತಂಡ, ಉದಯ ಯಡೂರು ತಂಡದ ವಿರುದ್ಧ 46 ಅಂಕಗಳ ಅಂತರದಲ್ಲಿ ಗೆಲುವು ಪಡೆಯಿತು. ನಾಲ್ಕನೇ ಪಂದ್ಯದಲ್ಲಿ ಎಚ್.ಎಂ.ಟಿ. ತಂಡ ರಾಮನಗರ ತಂಡವನ್ನು 22 ಅಂಕಗಳ ಅಂತರದಲ್ಲಿ ಸೋಲಿಸಿತು. ಐದನೇ ಪಂದ್ಯದಲ್ಲಿ ಎಚ್.ಎಂ.ಟಿ. ಕಾಲೋನಿ ಬಾಯ್ಸ್ ತಂಡ, ರಂಜಿತ್ ಫ್ರೆಂಡ್ಸ್ ತಂಡದ ವಿರುದ್ಧ 19 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು.
ವೈಯುಕ್ತಿಕ ಬಹುಮಾನ ವಿತರಣೆ: ಪಂದ್ಯಾಟದಲ್ಲಿ ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಎಸ್.ಬಿ.ಎಂ.ನ ಜವ್ಹರ್ ವಿವೇಕ್, ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಸೆಂಟ್ರಲ್ ಎಕ್ಸೈಜ್ನ ಪ್ರಪಂಚನ್, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ವಿಜಯ ಬ್ಯಾಂಕ್ನ ಪ್ರಶಾಂತ್ ರೈ ಪಡೆದರು.
ಪ್ರೋ ಕಬಡ್ಡಿ ದಂಡು: ಕಬಡ್ಡಿ ಕ್ರೀಡೆಯನ್ನು ಮುನ್ನೆಲೆಗೆ ತಂಡ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಲವು ಆಟಗಾರರು ಸೋಮವಾರಪೇಟೆಯ ಮೈದಾನದಲ್ಲಿ ಕಬಡ್ಡಿಯ ರಸದೌತಣ ಉಣಬಡಿಸಿದರು. ಸುಕೇಶ್ ಹೆಗ್ಡೆ (ತೆಲುಗು ಟೈಟನ್), ಪ್ರಶಾಂತ್ ರೈ (ದಬಾಂಗ್ ಡೆಲ್ಲಿ), ಸಚಿನ್ (ಪುಣೆ ವಾರಿಯರ್ರ್ಸ್), ಎಸ್.ಬಿ.ಎಂ.ನ ಸುರೇಶ್ ಕುಮಾರ್ (ಯು ಮುಂಬಾ), ಎಸ್.ಬಿ.ಎಂ.ನ ರಾಜ್ಗುರು (ತೆಲುಗು ಟೈಟಾನ್), ಎಸ್.ಬಿ.ಎಂ.ನ ಜೀವಕುಮಾರ್ (ಯು ಮುಂಬಾ), ಎಸ್.ಬಿ.ಎಂ.ನ ವಿನೋದ್ (ಬೆಂಗಳೂರು ಬುಲ್ಸ್), ಎಕ್ಸೈಜ್ನ ಪ್ರಪಂಚನ್ (ತೆಲುಗು ಟೈಟಾನ್), ಎಕ್ಸೈಜ್ನ ಅನೂಪ್ (ಯು ಮುಂಬಾ) ಆರ್.ಡಬ್ಲ್ಯು.ಎಫ್ನ ರವಿ ನಂದನ್(ತೆಲುಗು ಟೈಟನ್) ಅವರುಗಳ ಆಟ ಕಬಡ್ಡಿ ಪ್ರೇಮಿಗಳನ್ನು ರಂಜಿಸಿತು.
ಕ್ರೀಡಾಪಟುಗಳಿಗೆ ಸನ್ಮಾನ: ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಹಾನಗಲ್ಲು ಗ್ರಾಮದ ಡಿ.ಕೆ. ರಂಜಿತ, ಅಂತರರಾಷ್ಟ್ರೀಯ ಹಾಕಿ ಆಟಗಾರ ಹರಿ ಪ್ರಸಾದ್, ಕ್ರೀಡಾಪಟುಗಳಾದ ಮಂಜೂರು ತಮ್ಮಣ್ಣಿ, ಗೌಡಳ್ಳಿ ಪೃಥ್ವಿ, ನಗರೂರು ಪ್ರಕಾಶ್, ಗೌಡಳ್ಳಿ ಪ್ರಸ್ಸಿ, ಐ.ಎನ್. ತ್ರಿವೇಣ್ ಕುಮಾರ್, ಡಿವೈಎಸ್ಪಿ ಸಂಪತ್ ಕುಮಾರ್, ದಾನಿಗಳಾದ ಬೆಳ್ಳಿಗೌಡ್ರು, ನಾಪಂಡ ಮುತ್ತಪ್ಪ, ಟಿ.ಪಿ. ವಿರೇಂದ್ರ, ಟಿ.ಆರ್. ಪುರುಷೋತ್ತಮ್, ಜೆ.ಎಂ. ಗಿರೀಶ್ ಮಲ್ಲಪ್ಪ, ಕೆ.ಕೆ. ಅರುಣ್ ಕುಮಾರ್, ಎಚ್.ಪಿ. ಶೇಷಾದ್ರಿ ಸೇರಿದಂತೆ ಇತರ ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದಾನಿಗಳಾದ ಹರಪಳ್ಳಿ ರವೀಂದ್ರ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಉಪಾಧ್ಯಕ್ಷ ವಿ. ಜಯರಾಮ್, ಸಂಘಟನಾ ಕಾರ್ಯದರ್ಶಿ ಬಿ.ಸಿ. ರಮೇಶ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಅಧ್ಯಕ್ಷ ಎಚ್.ಎಸ್. ಉತ್ತಪ್ಪ, ಕಾಫಿ ಬೆಳೆಗಾರರಾದ ಎಚ್.ಪಿ. ಮೋಹನ್, ಎಚ್.ವಿ. ದಿವಾಕರ್, ಎಚ್.ವಿ. ಸುರೇಶ್ ಮತ್ತಿತರ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.
ಒಕ್ಕಲಿಗರ ಯುವ ವೇದಿಕೆಯ ನೂರಾರು ಕಾರ್ಯಕರ್ತರು ಯಶಸ್ವಿ ಪಂದ್ಯಾಟಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಿಳೆಯರು ಮತ್ತು ಮಕ್ಕಳು ರಾತ್ರಿ 1 ಗಂಟೆಯ ತನಕ ಗ್ಯಾಲರಿಯಲ್ಲೇ ಕುಳಿತು ಪಂದ್ಯಾಟಗಳನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.
–ವಿಜಯ್ ಹಾನಗಲ್