ಮೂರ್ನಾಡು, ಫೆ. 15: ಹಾಕತ್ತೂರು ಚರಕ ಚಿಕಿತ್ಸಾಲಯದ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾದ 17ನೇ ವರ್ಷದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು.
ಮಡಿಕೇರಿ ಅಶ್ವಿನಿ ಆಸ್ಪತ್ರೆ, ರೋಟರಿ ಮಿಸ್ಟಿಹಿಲ್ಸ್ ಮತ್ತು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಆಶ್ರಯದಲ್ಲಿ ಹಾಕತ್ತೂರು ಮಾದರಿ ಪ್ರಾಥಮಿಕ ಶಾಲೆ ಹಾಗೂ ಚರಕ ಚಿಕಿತ್ಸಾಲಯದ ಆವರಣದಲ್ಲಿ ನಡೆದ ಶಿಬಿರವನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರೂ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಂಡು ಆರೋಗ್ಯದ ಕುರಿತು ಹೆಚ್ಚಿನ ನಿಗಾವಹಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ದೇವಂಡಿರ ತಿಲಕ್ ಪೊನ್ನಪ್ಪ, ರತ್ನಾಕರ್ ರೈ, ಅಶ್ವಿನಿ ಆಸ್ಪತ್ರೆ ಟ್ರಸ್ಟಿ ಎಂ.ಎಸ್. ಗೋಖಲೆ, ಅಶ್ವಿನಿ ಆಸ್ಪತ್ರೆ ವೈದ್ಯ ಡಾ. ಪಿ.ಎನ್. ಕುಲಕರ್ಣಿ, ಹಾಕತ್ತೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಟಿ.ಪಿ. ಸ್ವಾಮಿ, ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಾಜಿ ಅಧ್ಯಕ್ಷ ಪಿ.ಈ. ದಿವಾಕರ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ. ಕುಲಕರ್ಣಿ, ಡಾ. ಮೋಹನ್ ಅಪ್ಪಾಜಿ, ಡಾ. ದೇವಯ್ಯ, ಡಾ. ಪಿ.ಎನ್. ಕುಲಕರ್ಣಿ, ಡಾ. ಧೃತಿ, ಡಾ. ಸುಧಾಕರ್, ಡಾ. ಅರುಣಾ ಭಟ್, ಡಾ. ಜ್ಯೋತಿಶ್ರೀ ಅವರುಗಳು ದಂತ, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ ಹಾಗೂ ಇತರೆ ತೊಂದರೆಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಶಾಲಾ ಮಕ್ಕಳು ಹಾಗೂ ಸುತ್ತಮುತ್ತಲ ಗ್ರಾಮಾಸ್ಥರು ಸೇರಿದಂತೆ 235 ಮಂದಿ ಶಿಬಿರದ ಪ್ರಯೋಜನ ಪಡೆದು ಕೊಂಡರು.