ಪೊನ್ನಂಪೇಟೆ, ಫೆ. 15: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಜಿ.ಪಂ. ಇಂಜಿನಿಯರಿಂಗ್ ವಿಭಾಗ ತಾಲೂಕಿನಾದ್ಯಂತ ಜನತೆಗೆ ಕುಡಿಯುವ ನೀರಿಗಾಗಿ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿರುವ ವೀರಾಜಪೇಟೆ ತಾ.ಪಂ. ಸಾಮಾನ್ಯ ಸಭೆ, ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಮಗ್ರ ಪ್ರಸ್ತಾವನೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲು ಶೀಘ್ರದಲ್ಲೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವಂತೆ ಒಮ್ಮತದಿಂದ ನಿರ್ಧರಿಸಲಾಯಿತು.ಪೊನ್ನಂಪೇಟೆಯ ತಾ.ಪಂ. ಆವರಣದಲ್ಲಿರುವ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ಬುಧವಾರದಂದು ತಾ.ಪಂ. ಅಧ್ಯಕ್ಷೆÀ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಜಿ.ಪಂ. ಇಂಜಿನಿಯರಿಂಗ್ ವಿಭಾಗದ (ಕುಡಿಯುವ ನೀರು ಯೋಜನೆ) ಪ್ರಗತಿ ಪರಿಶೀಲನೆ ವೇಳೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯ ಮಾಳೇಟಿರ ಪ್ರಶಾಂತ್ ಅವರು, ತೋರ ಮತ್ತು ಕೆದಮುಳ್ಳೂರು ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದರು. ಅದರಲ್ಲೂ ಇದೀಗ ಇಲಾಖೆ ಕೊಳವೆ ಬಾವಿಗೆ ನಿಯಂತ್ರಣ ಹೇರಿರುವದು ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಈ ಹಿಂದೆ ಸರಕಾರ ತೀವ್ರ ಬರಗಾಲ ಎದುರಾಗಿದ್ದ ರಾಜ್ಯದ 65 ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯುವದನ್ನು ನಿಷೇದಿಸಿ ಆದೇಶ ಹೊರಡಿಸಿತು.
(ಮೊದಲ ಪುಟದಿಂದ) ಬರಗಾಲದ ಪಟ್ಟಿಯಲ್ಲಿ ವೀರಾಜಪೇಟೆ ತಾಲೂಕು ಒಳಗೊಂಡಿತ್ತು. ಆದರೆ ಇದೀಗ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶವನ್ನು ಹಿಂಪಡೆದುಕೊಂಡಿದೆ. ಆದ್ದರಿಂದ ಕುಡಿಯುವ ನೀರಿಗಾಗಿ ವೀರಾಜಪೇಟೆ ತಾಲೂಕಿನಲ್ಲಿ ಕೊಳವೆ ಬಾವಿ ಕೊರೆಯಲು ಸಮಸ್ಯೆ ಇಲ್ಲ ಎಂದು ಹೇಳಿದರು.
ಸಭೆಯಲ್ಲಿ ಮುಂದುವರಿದು ಮಾತನಾಡಿದ ಸದಸ್ಯ ಪ್ರಶಾಂತ್, ಈಗಾಗಲೇ ಜಿ.ಪಂ.ನಿಂದಲೂ ಸಿ.ಎಂ. ಬಳಿಗೆ ನಿಯೋಗ ತೆರಳಿ ಕುಡಿಯುವ ನೀರಿಗಾಗಿ ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ಮನವಿ ಮಾಡಿದೆ. ಅದೇ ರೀತಿ ತಾ.ಪಂ. ವತಿಯಿಂದಲೂ ಸಿ.ಎಂ. ಬಳಿಗೆ ನಿಯೋಗ ತೆರಳಿ ಒತ್ತಡ ಹೇರಿದರೆ ಒಳಿತಾಗುವ ಸಾಧ್ಯತೆ ಇದೆ ಎಂದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಇದೀಗ ರಾಜ್ಯಾದ್ಯಂತ ನಡೆಯುತ್ತಿರುವ ದಡಾರಾ ಮತ್ತು ರುಬೆಲ್ಲಾ (ಎಂ.ಆರ್) ಚುಚ್ಚುಮದ್ದು ಅಭಿಯಾನದ ಬಗ್ಗೆ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಅವಕಾಶವಾಯಿತು.
ಅಭಿಯಾನಕ್ಕೆ ಸಹಕರಿಸದೆ 300 ಮಕ್ಕಳು ಚುಚ್ಚಮದ್ದು ಹಾಕಿಸಿಕೊಳ್ಳದ ಶಾಲೆಯ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಆಗ್ರಹ ವ್ಯಕ್ತಗೊಂಡಾಗ, ವಿವರಣೆ ನೀಡಿದ ಡಾ. ಯತಿರಾಜ್ ವೀರಾಜಪೇಟೆ ಸಮೀಪದ ಕಲ್ಲುಬಾಣೆಯ ಬದ್ರಿಯಾ ಶಾಲೆಯಲ್ಲಿರುವ ಒಟ್ಟು 375 ವಿದ್ಯಾರ್ಥಿಗಳ ಪೈಕಿ ಕೇವಲ 75 ವಿದ್ಯಾರ್ಥಿಗಳು ಮಾತ್ರ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಉಳಿದ ಮಕ್ಕಳ ಪೋಷಕರು ಚುಚ್ಚುಮದ್ದು ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಮಾಹಿತಿ ಕೊರತೆ ಮತ್ತು ಅನಗತ್ಯ ವದಂತಿಗಳೇ ಇದಕ್ಕೆ ಕಾರಣ ಇರಬಹುದು ಎಂದರಲ್ಲದೆ, ಈ ಕುರಿತು ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆ. ಈ ಬೇಜವಾಬ್ದಾರಿಗೆ ಶಾಲಾ ಮುಖ್ಯಸ್ಥರೆ ಹೊಣೆಗಾರರಾಗುತ್ತಾರೆ ಎಂದರು.
ಇದೇ ತಿಂಗಳ 28ರವರೆಗೆ ಅಭಿಯಾನ ಜರುಗಲಿದ್ದು, ಚುಚ್ಚುಮದ್ದು ತೆಗೆದುಕೊಂಡ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಪ ಪ್ರಮಾಣದ ಜ್ವರ ಕಾಣಿಸಿಕೊಳ್ಳುತ್ತದೆ. ಇದರಿಂದ ಯಾವದೇ ಪರಿಣಾಮವಿರುವದಿಲ್ಲ ಎಂದು ಸಭೆಗೆ ಮಾಹಿತಿ ನೀಡಿ ಯತಿರಾಜ್, ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಈ ಅಭಿಯಾನದ ಬಗ್ಗೆ ಯಾವದೇ ವದಂತಿಗಳಿಗೆ ಪೋಷಕರು ಕಿವಿಕೊಡಬಾರದು. ಈಗಾಗಲೆ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಸೃಷ್ಟಿಸಿದ ಹೊರಜಿಲ್ಲೆಯ ಐವರನ್ನು ಪೊಲೀಸರು ಬಂದಿಸಿದ್ದಾರೆ ಎಂದು ತಿಳಿಸಿದರು.
ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಜಾಲದ ಬಗ್ಗೆ ಸಭೆಯಲ್ಲಿ ಎಂದಿನಂತೆ ಚರ್ಚೆ ನಡೆಯಿತು.
ಇದೇ ವೇಳೆ ಅಬಕಾರಿ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಪ್ರಶಾಂತ್, ಮಾಹಿತಿ ಆಧಾರದಲ್ಲಿ ದಾಳಿ ನಡೆಸಲು ತೆರಳುವಾಗ ಇಲಾಖೆ ವಾಹನದಲ್ಲಿ ತೆರಳಿದರೆ ಏನು ಪ್ರಯೋಜನ. ಖಾಸಗಿ ವಾಹನದಲ್ಲಿ ತೆರಳಿದರೆ ಧಾಳಿ ಫಲಪ್ರದವಾಗಬಹುದೇನೋ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಸದಸ್ಯ ಅಜಿತ್ ಕರುಂಬಯ್ಯ, ಅಬಕಾರಿ ಇಲಾಖೆ ಪ್ರಮಾಣಿಕ ಪ್ರಯತ್ನ ನಡೆಸಿದರೆ ಅಕ್ರಮ ಮದ್ಯ ಮಾರಾಟ ಜಾಲ ನಿಯಂತ್ರಿಸುವದು ಕಷ್ಟದ ಕೆಲಸವೇನಲ್ಲ ಎಂದು ಹೇಳಿದರು.
ಸಭೆಯಲ್ಲಿ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ಅಜಿತ್ ಕರುಂಬಯ್ಯ ತಾಲೂಕಿನ ಹಲವೆಡೆ ಗಾಂಜಾ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಯುವಕರು ಬಲಿಯಾಗುತ್ತಿದ್ದಾರೆ ಎಂದರು. ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹೊಡೆದು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅಲ್ಲದೆ ಅಕ್ರಮ ಗೋಸಾಗಾಟವು ನಿರಂತರವಾಗಿ ನಡೆಯುತ್ತಿದೆ. ಅಲ್ಲದೆ ಮುಖ್ಯ ರಸ್ತೆಗಳಲ್ಲೂ ವೀಲಿಂಗ್ ಮಾಡಿ ಅಪಾಯವನ್ನು ತಾವೆ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಆದರೂ ಪೊಲೀಸ್ ಇಲಾಖೆ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಸಭೆಗೆ ವೃತ್ತನಿರೀಕ್ಷರಾದ ಕುಮಾರ್ ಆರಾಧ್ಯ ಭರವಸೆ ನೀಡಿದರು. ಮೆಡಿಕಲ್ ಶಾಪ್‍ಗಳಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮ ಜರುಗಿಸುವಂತೆ ಜಿಲ್ಲಾ ಔಷಧಿ ನಿಯಂತ್ರಕರಿಗೆ ತಾ.ಪಂ.ನಿಂದ ಪತ್ರ ಬರೆಯುವಂತೆ ಅಧ್ಯಕ್ಷರು ಸೂಚನೆ ನೀಡಿದರು.
ಮಾತನಾಡಿದ ಸದಸ್ಯೆ ಆಲತಂಡ ಸೀತಮ್ಮ, ಕೊಡಂಗೇರಿ ಭಾಗದಲ್ಲಿ ಬೆಳಗ್ಗಿನ ಜಾವ 4 ಗಂಟೆಯ ವೇಳೆ ಪಿಕ್‍ಅಪ್ ವಾಹನಗಳಲ್ಲಿ ಗೋ ಸಾಗಾಟ ನಡೆಯುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಣೇಶ್, ಕಾರ್ಯ ನಿರ್ವಹಣಾಧಿಕಾರಿ ಕಿರಣ್‍ರಾಯ್ ಪಡ್ನೇಕರ್ ಸೇರಿದಂತೆ ವಿವಿಧ ಕ್ಷೇತ್ರದ ಸದಸ್ಯರು, ವಿವಿಧ ಇಲಾಖಾಧಿಕಾರಿ ಗಳು ಹಾಜರಿದ್ದರು.
-ವರದಿ: ರಫೀಕ್ ತೂಚಮಕೇರಿ