ಮಡಿಕೇರಿ, ಫೆ. 15: ಹೊದ್ದೂರಿನಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕ್ರೀಡಾಂಗಣ ನಿರ್ಮಿಸುವ ಸಂಬಂಧ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿ ಕ್ರಮ ವಹಿಸಿದ್ದು, ಸಮಸ್ಯೆ ಬಗೆ ಹರಿದ ನಂತರ ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪೊಲೀಸ್ ಭದ್ರತೆ ಒದಗಿಸಲಾಗುವದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ಸದನದಲ್ಲಿ ಮಾತನಾಡಿದ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಇವರುಗಳು ಹೊದ್ದೂರು ಗ್ರಾಮದ ಸರ್ವೆ ನಂ. 267/2ಎ ಯಲ್ಲಿ 12.70 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ಗೆ ಗುತ್ತಿಗೆ ಆಧಾರದಲ್ಲಿ ನೀಡಿದ್ದರೂ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಗುತ್ತಿಗೆ ನೀಡಿದ ಜಾಗದಲ್ಲೇ ಶವ ಹೂಳಲು ಅವಕಾಶ ಮಾಡಿರುವದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ರವರ ಸ್ಟೇಡಿಯಂ ನಿರ್ಮಿಸಲು ಸೂಕ್ತ ರಕ್ಷಣೆ ಒದಗಿಸುವ ಬಗ್ಗೆ ಸಚಿವರ ಗಮನ ಸೆಳೆದರು.
ಉತ್ತರಿಸಿದ ಸಚಿವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು, ಇವರು ಕಾಮಗಾರಿಯನ್ನು ಆರಂಭಿಸಿದ ವೇಳೆ ತಹಶೀಲ್ದರ್ ಅವರು ಗುರುತು ಮಾಡಿಕೊಟ್ಟ 12.70 ಎಕರೆ ಜಾಗದ ಒಂದು ಭಾಗದ 2 ಎಕರೆ ಜಾಗದಲ್ಲಿ ಸುಮಾರು 40 ಶವ ಸಂಸ್ಕಾರ ಮಾಡಿರುವದಾಗಿ ಅಲ್ಲಿನ ಸ್ಥಳೀಯ ಎಸ್ಸಿ ಮತ್ತು ಎಸ್ಟಿ ಜನಾಂಗದವರು ಸ್ಥಳದಲ್ಲಿ ಸುಮಾರು 80 ರಿಂದ 100 ಜನರು ಸೇರಿಕೊಂಡು ಒಂದು ತಿಂಗಳ ಕಾಲ ರಾತ್ರಿ ಹಗಲು ಮೊಕ್ಕಾಂ ಹೂಡಿದ್ದು, ಈ ಸಂಬಂಧ ಕ್ರಿಕೆಟ್ ಸಂಸ್ಥೆ ಸಂಚಾಲಕ ಪೃಥ್ವಿ ದೇವಯ್ಯ ಅವರು, ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಜಾಗಕ್ಕೆ ಭೇಟಿ ನೀಡಿ ಸ್ಮಶಾನದಲ್ಲಿ ವಾಸ್ತವ್ಯವಿದ್ದ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಕ್ರಿಕೆಟ್ ಸಂಸ್ಥೆಗೆ ಮಂಜೂರಾಗಿರುವ ಜಾಗದಿಂದ 2 ಕಿ.ಮೀ. ದೂರದಲ್ಲಿ ರುವ ವಾಟೇಕಾಡು ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರಿಂದ ಸ್ಮಶಾನಕ್ಕಾಗಿ 4.70 ಎಕರೆ ಜಾಗವನ್ನು ಸರ್ವೆ ಮಾಡಿಸಿ ಗುರುತಿಸಿಕೊಡುವದಾಗಿ ಭರವಸೆ ನೀಡಿದ್ದರು.
ತಾ. 22.12.2016 ರಂದು ಪಾಲೆಮಾಡು ಪರಂಬು ಪೈಸಾರಿಯ ನಿವಾಸಿ, ತಮ್ಮಯ್ಯ ಎಂಬವರು ಮೃತಪಟ್ಟಿದ್ದು, ತಾ. 23.12.2016 ರಂದು ಬೆಳಿಗ್ಗೆ 10 ಗಂಟೆಯಿಂದ ಕ್ರಿಕೆಟ್ ಸಂಸ್ಥೆಯ ಗೇಟಿನ ಬಳಿ ಶವವನ್ನು ಇಟ್ಟುಕೊಂಡು 100 ರಿಂದ 150 ಮಂದಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥೆಗೆ ಮಂಜೂರಾದ ಸರ್ವೆ ನಂ. 167/1 (ಎ)ರ 2 ಎಕರೆ ಜಾಗದಲ್ಲಿ ಶವಸಂಸ್ಕಾರ ಮಾಡಲು ಜಿಲ್ಲಾಧಿಕಾರಿ ಅವರು ಮೌಖಿಕ ಆದೇಶ ನೀಡಿದ ಮೇರೆಗೆ ಆ ಸ್ಥಳದಲ್ಲಿ ಮೃತ ತಮ್ಮಯ್ಯ ಅವರ ಶವ ಸಂಸ್ಕಾರ ಮಾಡಲಾಗಿದೆ. ಶವ ಸಂಸ್ಕಾರ ನೆರವೇರಿಸಿದ ಜಾಗದಲ್ಲಿ ಒಂದು ತಾತ್ಕಾಲಿಕ ಗುಡಿಸಲನ್ನು ಕೂಡ ನಿರ್ಮಿಸಲಾಗಿತ್ತು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮಂಜೂರಾಗಿರುವ ಜಾಗದಲ್ಲಿ ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಿದ್ದು, ಸಮಸ್ಯೆ ಬಗೆಹರಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಿಗದಿತ ಸ್ಥಳದಲ್ಲಿ ಕ್ರಿಕೆಟ್ ಕ್ರೀಡಾಂಗಣ ಕಟ್ಟಲು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಭದ್ರತೆಯನ್ನು ನೀಡಲಾಗುವದು ಎಂದು ಸಚಿವರು ವಿವರಿಸಿದರು.