ಶ್ರೀಮಂಗಲ, ಫೆ. 15: ಕೇರಳ ಹಾಗೂ ರಾಜ್ಯದ ಗಡಿ ಭಾಗದ ಗುಡ್ಡಗಾಡು ಪ್ರದೇಶ ಟಿ.ಶೆಟ್ಟಿಗೇರಿ-ಬಿರುನಾಣಿ ಲೋಕೋಪಯೋಗಿ ಮುಖ್ಯ ರಸ್ತೆ ಅಗಲೀಕರಣಕ್ಕೆ ರಾಜ್ಯ ಸರಕಾರದಿಂದ ರೂ. 5 ಕೋಟಿ ಅನುದಾನ ಮಂಜೂರಾಗಿದೆ ಎಂದು ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಟಿ.ಶೆಟ್ಟಿಗೇರಿಯಿಂದ ಬಿರುನಾಣಿ ವರೆಗಿನ 10 ಕೀ.ಮಿ ರಸ್ತೆಯನ್ನು 3.5 ಮೀಟರ್ನಿಂದ 5.5 ಮೀಟರ್ವರೆಗೆ ಅಗಲೀಕರಣ ಮಾಡಲು ಯೋಜನೆ ಸಿದ್ಧಗೊಂಡಿದೆ. ಗುಡ್ಡಗಾಡು ಹಾಗೂ ಅತಿವೃಷ್ಟಿಗೆ ತುತ್ತಾಗುವ ಈ ಪ್ರದೇಶದಲ್ಲಿ ಚಿಕ್ಕ ರಸ್ತೆಯ 2 ಬದಿ ಮಣ್ಣುಗಳು ಕೊಚ್ಚಿ ಹೋಗಿ ಗುಂಡಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಎದುರಿನಿಂದ ಬರುವ ವಾಹನಕ್ಕೆ ಅವಕಾಶ ಮಾಡಿಕೊಡುವ ಸಂಧರ್ಭ ವಾಹನಗಳಿಗೂ ಹಾನಿಯಾಗುತಿತ್ತು. ಈ ರಸ್ತೆ ಅಗಲೀಕರಣ ಯೋಜನೆಯಿಂದ ಬಹುಕಾಲದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಗೆ ಲೋಕೋಪಯೋಗಿ ಸಚಿವ ಹೆಚ್.ಸಿ ಮಹದೇವ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್, ಲೋಕೋಪಯೋಗಿ ಸಚಿವರ ಕಾರ್ಯದರ್ಶಿ ಚೊಟ್ಟೆಯಂಡಮಾಡ ರಾಜೇಂದ್ರ ಅವರ ಮೂಲಕ ಟಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶುರವರ ಸಹಕಾರದ ಮೂಲಕ ಅನುದಾನ ಬಿಡುಗಡೆ ಹೊಂದಿದೆ ಎಂದು ಲಾಲಾ ಅಪ್ಪಣ್ಣ ತಿಳಿಸಿದ್ದಾರೆ.