ಮಡಿಕೇರಿ, ಫೆ. 15: ತಿತಿಮತಿ ಪಟ್ಟಣ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿರು ವದರಿಂದ ಸುವ್ಯವಸ್ಥಿತ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ವ್ಯವಸ್ಥೆಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾಹನ ದಟ್ಟಣೆಯಿಂದ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಈ ಹಿಂದೆಯೇ ಸಂಬಂಧಿಸಿ ದವರ ಗಮನ ಸೆಳೆದಿದ್ದರೂ ಯಾವದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಪಟ್ಟಣದಲ್ಲಿ ಮಿತಿ ಮೀರಿದ ವಾಹನಗಳಿಂದಾಗಿ ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳಿಗೆ ಮನವಿ ಪತ್ರದ ಮೂಲಕ ವಾಹನದಟ್ಟಣೆಯ ಗಂಭೀರತೆಯನ್ನು ತಿಳಿಸಲಾಗಿತ್ತು. ವೀರಾಜಪೇಟೆ ಡಿವೈಎಸ್‍ಪಿ ಯವರಿಗೂ ವಿಚಾರ ತಿಳಿದಿದ್ದು, ಸೂಕ್ತ ಕ್ರಮ ಕೈಗೊಳ್ಳವಂತೆ ಪೊನ್ನಂಪೇಟೆ ಉಪನಿರೀಕ್ಷಕರಿಗೆ ಆದೇಶ ಮಾಡಿದ್ದರೂ ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಪಿ.ಆರ್. ಪಂಕಜ ಆರೋಪಿಸಿದ್ದಾರೆ.

ಕೇವಲ 15 ದಿನಗಳಲ್ಲಿ ಮೂರು ಅಪಘಾತಗಳು ಸಂಭವಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ನೇರವಾಗಿ ಕ್ರಮ ಕೈಗೊಂಡು ವಾಹನ ನಿಲುಗಡೆ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.