ವೀರಾಜಪೇಟೆ, ಫೆ.15: ಮಕ್ಕಳ ಭವಿಷ್ಯಕ್ಕಾಗಿ, ಅವರ ಒಳಿತಿಗಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿ, ಸಾಕಿ ಸಲಹಿದ ತಂದೆ ತಾಯಿಗಳನ್ನು ವೃದ್ದಾಪ್ಯದಲ್ಲಿ ಕಡೆಗಣಿಸುವದು ಸೂಕ್ತವಲ್ಲ ಎಂದು ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅಭಿಪ್ರಾಯಪಟ್ಟರು.
ಹೆಗ್ಗಳ ಗ್ರಾಮದಲ್ಲಿರುವ ಸೈಂಟ್ ಸ್ಟೀಫನ್ ಚಾರಿಟೆಬಲ್ ಸೊಸೈಟಿಯ ಬಡ, ನಿರ್ಗತಿಕ, ಅನಾಥರ ಆಶ್ರಯ ಕೇಂದ್ರ ಸ್ನೇಹ ಭವನದ ನವೀಕರಿಸಿದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದುಲೈಮುತ್ತು ಮಾತನಾಡಿ, ಧರ್ಮ ಜಾತಿ ಮತ ಬೇಧÀಕ್ಕಿಂತ ಮಾನವಿಯತೆ ಮುಖ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಗುರು ಡಾ. ಲಾರೆನ್ಸ್ ಮುಕ್ಕುಯಿ, ಸೈಂಟ್ ಸ್ಟೀಫನ್ ಚಾರಿಟೆಬಲ್ ಸೊಸೈಟಿಯ ಸ್ಥಾಪಕರು ಹಾಗೂ ಅಧ್ಯಕ್ಷರು ಆದ ಎಂ.ಜೆ. ಸ್ಟೀಫನ್ ಮುಂಗುಯಿಯನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಸೈಂಟ್ ಜೂಡ್ಸ್ ದೇವಾಲಯದ ಧರ್ಮಗುರು ಅಗಸ್ಟಿನ್ ಪೊಟ್ಟಂಕುಳಂಗರ, ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಬೇಟೋಳಿ ಗ್ರಾ.ಪಂ. ಅಧ್ಯಕ್ಷೆ ಬಿ.ಬಿ ಚೊಂದಮ್ಮ ಹಾಗೂ ಉಪಾಧ್ಯಕ್ಷ ಎ.ಎ. ವಸಂತ ಕಟ್ಟಿ ಮತ್ತು ಗ್ರಾ.ಪಂ. ಸದಸ್ಯರಾದ ಲೀಲಾವತಿ ಹಾಗೂ ಸರಸ್ವತಿ, ಸಿದ್ದಾಪುರದ ಧರ್ಮಗುರು ಜಾನ್ಸನ್ ಉಪಸ್ಥಿತರಿದ್ದರು. ಕಾವೇರಿ ಕಾಲೇಜು ಉಪನ್ಯಾಸಕ ಬೆನಡಿಕ್ಟ್ ಸಾಲ್ಡಾನ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ನೇಹ ಭವನದ ಕಾರ್ಯನಿರ್ವಾಹಕ ಜೋಬಲ್ ಜಾರ್ಜ್ ಸ್ವಾಗತಿಸಿ, ಪಾಪಚ್ಚನ್ ವಂದಿಸಿದರು.