ಮಡಿಕೇರಿ, ಫೆ. 15: ಮಡಿಕೇರಿ ನಗರದಲ್ಲಿ ಖಾಸಗಿ ಸಂಸ್ಥೆ ವತಿಯಿಂದ ಬಾಡಿಗೆ ಆಧಾರದಲ್ಲಿ ಬೈಕ್ ನೀಡಲು ಮುಂದಾಗಿರುವದನ್ನು ನಗರದ ವಾಹನ ಚಾಲಕ- ಮಾಲೀಕರ ಸಂಘದ ಸದಸ್ಯರು ವಿರೋಧಿಸಿದ್ದಾರೆ. ಸಂಸ್ಥೆಯ ಈ ಉದ್ಯಮವನ್ನು ವಿರೋಧಿಸಿ ಇಂದು ನಗರದಲ್ಲಿ ಮಡಿಕೇರಿ ಪ್ರವಾಸಿಗರ ವಾಹನ ಮಾಲೀಕರ ಮತ್ತು ಚಾಲಕರ ಸಂಘ, ಆಟೋ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಇದಕ್ಕೆ ಅನುಮತಿ ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.ಪ್ರವಾಸಿ ವಾಹನ ಮಾಲೀಕರ ಸಂಘದಲ್ಲಿ 110 ಕಾವೇರಿ ಸಂಘದಲ್ಲಿ 90 ವಾಹನಗಳಿದ್ದು, ಅವಲಂಭಿತರಿದ್ದಾರೆ. ನಗರದಲ್ಲಿ 1400ರಷ್ಟು ಆಟೋಗಳಿದ್ದು, ಎಲ್ಲರೂ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.

ವಾಹನಗಳ ಸಾಲ ತೀರಿಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭ ಪುಟ್ಟ ನಗರದಲ್ಲಿ ಬಾಡಿಗೆಗೆ ಬೈಕ್ ನೀಡಿದಲ್ಲಿ ಇವರೆಲ್ಲರ ಜೀವನ ದುಸ್ತರವಾಗಲಿದ್ದು, ಅನುಮತಿಯನ್ನು ರದ್ದುಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ವಾಹನಗಳ ಬಿಡಿಭಾಗ, ತೆರಿಗೆ ಇಲ್ಯಾದಿಗಳು ಮೂರುಪಟ್ಟು ಹೆಚ್ಚಾಗಿದ್ದು, ಚಾಲಕರು, ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ನಡುವೆ ಆರ್ಥಿಕವಾಗಿ ಸಮರ್ಥವಾಗಿರುವ ಖಾಸಗಿ ಸಂಸ್ಥೆ, ವಿದೇಶಿ ಸಂಸ್ಥೆಗಳಿಗೆ ಇಂತಹ ಅವಕಾಶ ನೀಡಿದರೆ ಸ್ಥಳೀಯರು ಬದುಕುವದು ಹೇಗೆಂದು ಪ್ರಶ್ನಿಸಿ ಇದರ ವಿರುದ್ಧ ಜಿಲ್ಲಾಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಚಾಲಕರ ಕಷ್ಟವನ್ನು ಸಂಬಂಧಿಸಿದವರು ಅರಿಯಬೇಕು. 15 ದಿನಗಳಲ್ಲಿ ರದ್ದತಿ ಆದೇಶ ಹೊರಬೀಳದಿದ್ದರೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯಿತ್ತರು.

ಬೆಳಿಗ್ಗೆ ಪರಸ್ಪರ ಗೊಂದಲ

ಇಂದು ಪ್ರತಿಭಟನೆಗೆ ಕರೆ ನೀಡಿದ್ದ ಸಂಘ ವಾಹನಗಳನ್ನು ದಿನವಿಡೀ ವಾಹನ ಓಡಿಸದೇ ಸ್ಥಗಿತಗೊಳಿಸುವದಾಗಿ ಕರೆ ನೀಡಿತ್ತು. ಆದರೆ ಕೆಲವು ಆಟೋ ಚಾಲಕರು ಬೆಳಿಗ್ಗೆ ಬಾಡಿಗೆ ಮಾಡುತ್ತಿದ್ದುದು ಗಮನಕ್ಕೆ ಬಂದು ಇತರರು ಅದಕ್ಕೆ ತಡೆಯೊಡ್ಡಿದ ಪ್ರಸಂಗವೂ ನಡೆಯಿತು. ಇನ್ನೋರ್ವ ಚಾಲಕ ಕಾರಿನಲ್ಲಿ ಪ್ರವಾಸಿಗರನ್ನು ಮಂಗಳೂರಿನತ್ತ ಕರೆದೊಯ್ಯುತ್ತಿದ್ದ ಸಂದರ್ಭ ಈ ವಾಹನವನ್ನು ತಿಮ್ಮಯ್ಯ ವೃತ್ತದ ಬಳಿ ತಡೆಹಿಡಿಯಲಾಯಿತು. ಇದರಿಂದಾಗಿ ಮಂಗಳೂರಿನ ವಿಮಾನ ನಿಲ್ದಾಣ ತಲಪಲು ಹೊರಟಿದ್ದ ಪ್ರವಾಸಿಗರು ಕೆಲಹೊತ್ತು ಆತಂಕ ಎದುರಿಸಬೇಕಾಯಿತು. ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ನಂತರ ಇವರನ್ನು ಕಳುಹಿಸಿಕೊಡಲಾಯಿತು.

ಮೊದಲು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಉಪವಿಭಾಗಾಧಿಕಾರಿ ನಂಜುಂಡೇಗೌಡ ಅವರು ಆಗಮಿಸಿದರಾದರೂ ಜಿಲ್ಲಾಧಿಕಾರಿಗಳೇ ಆಗಮಿಸಬೇಕೆಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು ಮನವಿ ಸ್ವೀಕರಿಸಿ ಈ ಬಗ್ಗೆ ಸರಕಾರದೊಂದಿಗೆ ಚರ್ಚಿಸುವ ಭರವಸೆಯಿತ್ತರು. ಪ್ರತಿಭಟನೆಯಲ್ಲಿ ಮಡಿಕೇರಿ ಪ್ರವಾಸಿ ವಾಹನ ಮಾಲೀಕರ- ಚಾಲಕರ ಸಂಘದ ಅಧ್ಯಕ್ಷ ವೀರೇಂದ್ರ ಹಾಗೂ ಪದಾಧಿಕಾರಿಗಳು, ಆಟೋ ಚಾಲಕ - ಮಾಲೀಕರ ಸಂಘದ ಅಧ್ಯಕ್ಷ ಮೇದಪ್ಪ ಹಾಗೂ ಪದಾಧಿಕಾರಿಗಳು ಕಾವೇರಿ ಸಂಘದ ಅಧ್ಯಕ್ಷ ಬದ್ದಂಜೆಟ್ಟಿರ ಜಗದೀಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಾರು - ಆಟೋ ಸಂಚಾರ ಸ್ಥಗಿತವಾಗಿದ್ದರಿಂದ ನಗರದ ಜನತೆ ಪರದಾಡಬೇಕಾಯಿತು.