ಮಡಿಕೇರಿ, ಫೆ. 15: ಮಹಿಳೆಗೆ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಂದಿ ಬಸವನಹಳ್ಳಿ ಗ್ರಾಮದ ಸೋಮಶೇಖರ್ ಎಂಬಾತ ಪತ್ನಿ ಪ್ರೇಮಾಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರಿಂದ ಮನನೊಂದು ಪ್ರೇಮಾ ತಾ. 19.3.2014ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪೊಲೀಸರು ಸೋಮ ಶೇಖರ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು, ಆರೋಪಿತ ತನ್ನ ಮಡದಿ ಮೇಲೆ ದೌರ್ಜನ್ಯ ಎಸಗಿರುವದು ಮಾತ್ರ ಸಾಬೀತಾಗಿದೆ ಎಂದು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಇದು ದುಷ್ಪ್ರೇರಣೆಯಾಗಿದೆ ಎಂದು ಹೇಳಲು ಬರುವದಿಲ್ಲವೆಂದು ತೀರ್ಪು ನೀಡಿ, ಮಹಿಳೆಗೆ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ 2 ವರ್ಷ ಕಠಿಣ ಸಜೆ ಮತ್ತು ರೂ. 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದ ಮಂಡಿಸಿದರು.