ಸೋಮವಾರಪೇಟೆ, ಫೆ. 15: ತಾ. 16ರಂದು (ಇಂದು) ಕುಶಾಲನಗರದಲ್ಲಿ ಆಯೋಜಿಸಲಾಗಿರುವ ಮುಸ್ಲಿಂ ಧಾರ್ಮಿಕ ಸಮ್ಮೇಳನ ಹೆಸರಿನ ಕಾರ್ಯಕ್ರಮವು ಜಿಲ್ಲೆಯ ಮುಸಲ್ಮಾನರ ಭಾವನೆಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದು, ಇದನ್ನು ಸೋಮವಾರಪೇಟೆಯ ಹನಫಿ ಜಾಮೀಯ ಮಸೀದಿ ತೀವ್ರವಾಗಿ ಖಂಡಿಸುತ್ತದೆ ಎಂದು ಮಸೀದಿಯ ಅಧ್ಯಕ್ಷರಾದ ಎಂ.ವೈ. ಮುಕ್ರಂ ಬೇಗ್ ಬಾಬು ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಶೇಕಡ 98 ರಷ್ಟು ಸುನ್ನೀ ಪಂಗಡಕ್ಕೆ ಸೇರಿದ ಮುಸಲ್ಮಾನರಿದ್ದು, ಅನ್ಯ ಧರ್ಮವನ್ನು ಗೌರವಿಸುವವರಾಗಿದ್ದಾರೆ. ಆದರೆ ಕೋಮುವಾದಿಗಳಾಗಿರುವ ಒಂದು ಪಂಗಡ ಧರ್ಮ ಪ್ರಚಾರಕರ ಸೋಗಿನಲ್ಲಿ ಯುವ ಸಮೂಹವನ್ನು ತಪ್ಪುದಾರಿಗೆ ಎಳೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಆರೋಪಿಸಿದರು.
ಕೊಣನೂರು, ಕೊಡ್ಲಿಪೇಟೆ, ಸೋಮವಾರಪೇಟೆಯ ಮಸೀದಿಯಲ್ಲಿ ಈಗಾಗಲೇ ವಹಾಭಿಗಳ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದ ಅವರು ತಾ. 16 ರ ಗುರುವಾರ ಕುಶಾಲನಗರದ ಜಾತ್ರಾ ಮೈದಾನದಲ್ಲಿ ನಡೆಯಲಿರುವ ಈ ಸಮ್ಮೇಳನದಿಂದ ಏನಾದರೂ ಅನಾಹುತಗಳು ನಡೆದರೆ ಆಯೋಜಕರೇ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೋಮವಾರಪೇಟೆ ನಗರದಲ್ಲೂ ಕೆಲವರು ಈ ಸಮ್ಮೇಳನಕ್ಕೆ ಕೈಜೋಡಿಸಿದ್ದು, ವಿದೇಶಗಳಿಂದ ಇಂತಹ ಸಮ್ಮೇಳನಕ್ಕೆ ಹಣ ಬರುವ ಸಂಶಯವಿದೆ.