ಕೆಜಿಬಿ ಪ್ರಶ್ನೆಗೆ ಸಚಿವ ಆಂಜನೇಯ ಪ್ರತಿಕ್ರಿಯೆ
ಮಡಿಕೇರಿ, ಫೆ. 15: ಕೇಂದ್ರ ಸರ್ಕಾರದ ಸೂಚನೆಯಂತೆ ಕೊಡಗಿನ ಪ್ರಮುಖ ಜನಾಂಗವಾದ ಕೊಡವರ ಸ್ಥಿತಿಗತಿಗಳ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸಲು ಕೈಗೊಳ್ಳಲಾಗಿದ್ದ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಸ್ಪಷ್ಟ ಪಡಿಸಿದ್ದಾರೆ.
ಸದನದಲ್ಲಿಂದು ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಲು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆಗೆ ಮಂಜೂರಾತಿ ನೀಡಲಾಗಿತ್ತು. ಸಂಸ್ಥೆಯಿಂದ ಸಮುದಾಯದ ಬಗ್ಗೆ ಅಧ್ಯಯನ ನಡೆಸಲು ಪ್ರಾರಂಭಿಸಿದಾಗ ಕೆಲವು ದೃಶ್ಯ ಮಾಧ್ಯಮಗಳು ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳು ಪ್ರಸಾರವಾಗಿ, ಸಮುದಾಯದ ಕುಟುಂಬಗಳು ಕ್ಷೇತ್ರ ಕಾರ್ಯ ಕೈಗೊಂಡ ಮಾಹಿತಿ ಸಂಗ್ರಹಕರಿಗೆ ಸಮರ್ಪಕವಾದ ಮಾಹಿತಿ ನೀಡಿಲ್ಲ. ಜಿಲ್ಲೆಯ ಸಂಘಟನೆಗಳು ಮತ್ತು ಪ್ರಮುಖರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರವನ್ನು ಅತೀ ಸೂಕ್ಷ್ಮವೆಂದು ಪರಿಗಣಿಸಿ ಕುಲಶಾಸ್ತ್ರೀಯ ಅಧ್ಯಯನವನ್ನು ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸುವದಾಗಿ ಸಚಿವರು ಭರವಸೆಯಿತ್ತರು.