ಮಡಿಕೇರಿ, ಫೆ. 15: ಪಡಿತರ ಹೊಂದಿಕೊಳ್ಳಲು ತೆರೆಯಲಾಗಿದ್ದ ಪಡಿತರ ಕೂಪನ್ ನೀಡುವ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ.

ಸರಕಾರದ ನಿಯಮದಂತೆ ಕಾಳಸಂತೆಯಲ್ಲಿ ಪಡಿತರ ಮಾರಾಟವಾಗುವದನ್ನು ತಡೆಗಟ್ಟುವ ಸಲುವಾಗಿ ಪಡಿತರ ಹೊಂದಿಕೊಳ್ಳಲು ಕೂಪನ್ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿದ್ದು, ಈ ಸಂಬಂಧ ಮಡಿಕೇರಿಯಲ್ಲಿ ನಗರಸಭೆ ಕಟ್ಟಡ ಹಾಗೂ ಮಹದೇವಪೇಟೆಯ ಕಾವೇರಿ ಗ್ರೂಪ್ ಕಟ್ಟಡದಲ್ಲಿರುವ ಏಜೆನ್ಸಿಗಳಿಗೆ ನೀಡಲಾಗಿತ್ತು. ಕೂಪನ್ ಅನ್ನು ಗ್ರಾಹಕರಿಗೆ ಉಚಿತವಾಗಿಯೇ ನೀಡಬೇಕಿದೆ. ಏಜೆನ್ಸಿಗಳಿಗೆ ಆಹಾರ ಇಲಾಖೆ ಮೂಲಕ ಹಣ ಪಾವತಿಯಾಗುತ್ತದೆ. ಆದರೆ ಈ ಎರಡೂ ಕೇಂದ್ರಗಳಲ್ಲಿ ಗ್ರಾಹಕರಿಂದ 5 ರಿಂದ 10 ರೂ. ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆಹಾರ ಇಲಾಖಾ ಅಧಿಕಾರಿಗೆ ದೂರು ಬಂದ ಹಿನ್ನೆಲೆಯಲ್ಲಿ ಇದೀಗ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖಾ ಉಪನಿರ್ದೇಶಕ ಚಂದ್ರಕಾಂತನಾಯಕ್ ಅವರು, ಕೇಂದ್ರಗಳಲ್ಲಿ 5 ರಿಂದ 10 ರೂ. ವರೆಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿತ್ತು. ಕೇಂದ್ರದವರು ಹಣ ಪಡೆಯುವದಿಲ್ಲವೆಂದು ಲಿಖಿತವಾಗಿ ಬರೆದು ಕೊಟ್ಟಿದ್ದರೂ ಮತ್ತೆ ಮತ್ತೆ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಚಟುವಟಿಕೆ ಸ್ಥಗಿತಗೊಳಿಸಿರುವದಾಗಿ ತಿಳಿಸಿದ್ದಾರೆ.

ಏಜೆನ್ಸಿಗಳಿಗೆ ಇಲಾಖೆ ಮೂಲಕ ಹಣ ನೀಡಲಾಗುತ್ತದೆ. ಒಂದು ಕೂಪನ್‍ಗೆ ರೂ. 3 ರಂತೆ ಹಣ ಪಾವತಿ ಮಾಡಲಾಗುತ್ತಿದೆ. ಈ ಬಾರಿ ಹಣ ನೀಡಲು ಕೊಂಚ ವಿಳಂಬವಾಗಿದೆ. ಅದನ್ನೇ ನೆಪವಾಗಿರಿಸಿಕೊಂಡು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ. ಇನ್ನೆರಡು ದಿನಗಳಲ್ಲಿ ಪಾವತಿ ಮಾಡಲಾಗುವದೆಂದು ತಿಳಿಸಿದ್ದಾರೆ. ಕೂಪನ್ ವಿತರಿಸಲು ಏಜೆನ್ಸಿಗಳು ಮುಂದೆ ಬರುತ್ತಿಲ್ಲ. ಯಾರಾದರೂ ಮುಂದೆ ಬಂದರೆ ಅವಕಾಶ ನೀಡಲಾಗುವದು. ಇಲ್ಲವಾದಲ್ಲಿ ಸ್ಥಗಿತಗೊಳಿಸಿದ ಸಂದರ್ಭ ಜನರಿಗೆ ತೊಂದರೆಯಾಗಲಿದೆ ಎಂದು ಹೇಳಿದರು. ಈ ಹಿಂದೆ ಕೂಡ ಒಮ್ಮೆ ಇದೇ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿತ್ತೆಂದು ತಿಳಿಸಿದರು.