ಗೋಣಿಕೊಪ್ಪಲು, ಫೆ. 16: ಸರಕಾರದ ಅಧಿನಿಯಮದಂತೆ ಆರ್.ಟಿ.ಐ. ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾಗಿರುವ ಎಲ್ಲಾ ಶಾಲೆಯ ಮಕ್ಕಳಿಗೆ ಸರಕಾರ ನಿಗದಿಪಡಿಸಿರುವ ಗರಿಷ್ಠ ಮೊತ್ತವನ್ನು ಒಂದೇ ರೀತಿಯಲ್ಲಿ ಪಾವತಿಸುವಂತೆ ಮತ್ತು ಇದಕ್ಕೆ ಬೇಕಾದ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಅಧ್ಯಕ್ಷ ಕೋಳೆರ ಝರು ಗಣಪತಿ ಹಾಗೂ ಕಾರ್ಯದರ್ಶಿ ಕೆ.ಎಸ್. ತಿಮ್ಮಯ್ಯ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಶೇ. 25 ರಷ್ಟು ವಿಧ್ಯಾರ್ಥಿಗಳನ್ನು ಸರಕಾರ ಖಾಸಗಿ ಶಾಲೆಗಳಲ್ಲಿ ದಾಖಲು ಮಾಡಿದ್ದು, ಸರಕಾರವೇ ಒಂದು ಮೊತ್ತವನ್ನು ನಿಗದಿ ಮಾಡಿದೆ. ಆದರೆ ದಾಖಲಾದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಲ್ಲಿ ತಾರತಮ್ಯ ಎಸಗುತ್ತಿದ್ದು, ಇದರಿಂದ ಶಾಲೆಗಳ ನಿರ್ವಹಣೆಯಲ್ಲಿ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಾಲಾ ಶುಲ್ಕ ಕಡಿಮೆ ಇದ್ದು, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಶಾಲೆಗೆ ಮರು ಪಾವತಿ ಮಾಡುತ್ತಿರುವ ಮೊತ್ತ ತುಂಬಾ ಕಡಿಮೆ ಇದ್ದು ಇದನ್ನು ಸರಿದೂಗಿಸುವಂತೆ ಆಗ್ರಹಿಸಿದ್ದಾರೆ.