ವೀರಾಜಪೇಟೆ, ಫೆ. 16: ಕಾಫಿಗೆ ಚೀಲವೊಂದಕ್ಕೆ ಪ್ರಸ್ತುತದ ಮಾರುಕಟ್ಟೆಯಲ್ಲಿನ ಧಾರಣೆಗಿಂತ ರೂ. 100ರಿಂದ ರೂ. 200 ಹೆಚ್ಚಿಗೆ ನೀಡುವ ಆಮಿಷವೊಡ್ಡಿ ವ್ಯಾಪಾರದಲ್ಲಿ ವಂಚನೆ ಮಾಡುತ್ತಿದ್ದ ಪ್ರಕರಣವೊಂದು ಬಯಲಿಗೆ ಬಂದಿದೆ. ಇಂತಹ ಪ್ರಯತ್ನ ನಡೆಸುತ್ತಿದ್ದ ವ್ಯಾಪಾರಿಯೋರ್ವ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಕಾಫಿ ಬೆಳೆಗಾರರು ಕಾಫಿ ಮಾರಾಟ ಸಂದರ್ಭ ಜಾಗ್ರತೆಯಿಂದಿರಬೇಕೆಂದು ಈ ಪ್ರಕರಣವನ್ನು ಉದಾಹರಿಸಿ ಕಾಫಿ ಬೆಳೆಗಾರರೂ ಆಗಿರುವ ಕಾವೇರಿ ಸೇನೆಯ ಜಿಲ್ಲಾ ಕಾರ್ಯದರ್ಶಿ ಕೋಲತಂಡ ರಘು ಮಾಚಯ್ಯ ಸಲಹೆ ನೀಡಿದ್ದಾರೆ. ಈ ಪ್ರಕರಣ ಬಯಲಾಗಿರುವದು ನಿನ್ನೆ ರುದ್ರಗುಪ್ಪೆ ಗ್ರಾಮದಲ್ಲಿ. ಅಲ್ಲಿನ ವಿಧವಾ ಮಹಿಳೆಯೋರ್ವರನ್ನು ಈ ವ್ಯಾಪಾರಿ ವಂಚಿಸಲು ಯತ್ನಿಸುತ್ತಿದ್ದ ಸುಳಿವರಿತ ಸಂಬಂಧಿಕರು, ಊರಿನವರು ಇದನ್ನು ಪತ್ತೆಹಚ್ಚಿದ್ದಾರೆ. ವ್ಯವಸ್ಥಿತ ಜಾಲವೊಂದು ಈ ರೀತಿಯ ಪ್ರಯತ್ನವನ್ನು ನಡೆಸುತ್ತಿರುವ ಕುರಿತು ಸಂಶಯವುಂಟಾಗಿದ್ದು, ಬೆಳೆಗಾರರು ಎಚ್ಚರ ವಹಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಪಿಕ್ಅಪ್ ವಾಹನವನ್ನು ಹೊಂದಿರುವ ವೀರಾಜಪೇಟೆಯ ವ್ಯಾಪಾರಿಯೋರ್ವ ನಿನ್ನೆ ರುದ್ರಗುಪ್ಪೆಯ ವಿಧವಾ ಮಹಿಳೆಯೋರ್ವರಿಗೆ ಚೀಲವೊಂದಕ್ಕೆ ರೂ. 3750 ಧಾರಣೆ ನೀಡುವದಾಗಿ ಹೇಳಿದ್ದಾನೆ. ಆದರೆ ನಿನ್ನೆ ಇಷ್ಟು ಧಾರಣೆ ಇರಲಿಲ್ಲ. ತೂಕದ ಯಂತ್ರದೊಂದಿಗೆ ಮನೆಗೆ ತೆರಳಿ ಕಾಫಿ ತೂಕ ಮಾಡಿ ಇವರು ವ್ಯಾಪಾರ ಮಾಡುತ್ತಾರೆ. ಇದರಂತೆ ನಿನ್ನೆಯೂ ತೆರಳಿದ್ದಾರೆ. ಈ ನಡುವೆ ಇದೇ ವ್ಯಾಪಾರಿ ಕಳೆದ ಜನವರಿಯಲ್ಲಿ ಇದೇ ಮಹಿಳೆಯಿಂದ 50ಕ್ಕೂ ಅಧಿಕ ಚೀಲ ಕಾಫಿ ಖರೀದಿಸಿದ್ದಾನೆ.
ಆ ಸಂದರ್ಭ ಹೊರಗಡೆ ವ್ಯಾಸಂಗ ಮಾಡುತ್ತಿರುವ ಆಕೆಯ ಪುತ್ರನಿಗೆ ತೂಕದ ವಿಚಾರದಲ್ಲಿ ಸಂಶಯವುಂಟಾಗಿತ್ತಾದರೂ ತೋರ್ಪಡಿಸಿರಲಿಲ್ಲ. ಇದೀಗ ಅವರು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಖರೀದಿಸಿದ್ದರು. ನಿನ್ನೆ ವೀರಾಜಪೇಟೆ ಚಿಕ್ಕಪೇಟೆಯಲ್ಲಿ
(ಮೊದಲ ಪುಟದಿಂದ) ವಿಘ್ನೇಶ್ವರ ಹೆಸರಿನ ಪಿಕ್ಅಪ್ ಹೊಂದಿರುವ ಈ ವ್ಯಾಪಾರಿ ಮತ್ತೆ ಕಾಫಿ ಖರೀದಿಗೆ ತೆರಳಿದ್ದಾನೆ. ಈತ ತೂಕದ ಯಂತ್ರವನ್ನು ಅದು ಯಾವ ರೀತಿ ಪರಿವರ್ತಿಸಿಕೊಂಡಿದ್ದಾನೋ ಅರಿಯದು. 64 ಕೆ.ಜಿ. ಕಾಫಿಯನ್ನು ಚೀಲವೊಂದಕ್ಕೆ ತುಂಬಿದರೆ ಈ ಯಂತ್ರ 51 ಕೆ.ಜಿ. ಎಂದು ತೋರಿಸುತ್ತದೆ. ಮೊದಲೇ ಸಂಶಯ ಇದ್ದುದರಿಂದ ನಾಲ್ಕೈದು ಚೀಲ ತುಂಬಿದ ಬಳಿಕ ದಿಢೀರನೆ ಅಲ್ಲಿಗೆ ಆಗಮಿಸಿದ ಸ್ಥಳೀಯರು ಬೇರೆ ಯಂತ್ರದಲ್ಲಿ ಕಾಫಿಯನ್ನು ತೂಗಿದಾಗ ಅದು ಚೀಲವೊಂದರಲ್ಲಿ 64 ಕೆ.ಜಿ. ಇದ್ದುದು ಬಯಲಾಗಿದೆ. ಮಾತ್ರವಲ್ಲದೆ ಚೀಲಕೂಡ ದೊಡ್ಡದಾಗಿದ್ದು, ಸಾಮಾನ್ಯ ನೋಟಕ್ಕೆ ಅರಿವಾಗದು.
ಈ ಕುರಿತು ವ್ಯಾಪಾರಿಗೆ ಬಿಸಿಮುಟ್ಟಿಸಿದ ಸಂದರ್ಭ ಆತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಜಾಗ ಖಾಲಿಮಾಡಿದ್ದಾನೆ. ಇಂತಹ ಪ್ರಕರಣಗಳು ತಾಲೂಕಿನ ವಿವಿಧೆಡೆ ನಡೆಯುತ್ತಿವೆ. ವಂಚನೆಯ ಉದ್ದೇಶ ಹೊಂದಿರುವವರು, ಇಳಿವಯಸ್ಸಿನವರು, ವಿಧವಾ ಮಹಿಳೆಯರು ಅಥವಾ ಅವಲಂಬಿತರಿಲ್ಲದ ಸಣ್ಣ ಪ್ರಾಯದ ಮಕ್ಕಳನ್ನು ಗುರುತಿಸಿಕೊಂಡು ವಂಚಿಸುತ್ತಿರುವದಾಗಿ ರಘು ಮಾಚಯ್ಯ ಅವರು ಆಪಾದಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲದ ಕೈವಾಡ ಇರುವದಾಗಿಯೂ ಸಂಶಯ ವ್ಯಕ್ತಪಡಿಸಿರುವ ಅವರು ಬೆಳೆಗಾರರು ಮಾರಾಟ ಸಂದರ್ಭ ಎಚ್ಚರವಹಿಸುವಂತೆ ಸಲಹೆಯಿತ್ತಿದ್ದಾರೆ. ಈ ಕುರಿತು ವೀರಾಜಪೇಟೆಯಲ್ಲಿ ಇಂದು ಸುದ್ದಿಗೋಷ್ಠಿಯ ಮೂಲಕವೂ ಅವರು ಮಾಹಿತಿ ನೀಡಿದ್ದಾರೆ. ಗೋಷ್ಠಿಯಲ್ಲಿ ಬೆಳೆಗಾರರಾದ ಮುಲ್ಲೇಂಗಡ ನಾಚಪ್ಪ ಉಪಸ್ಥಿತರಿದ್ದರು.