ಮಡಿಕೇರಿ, ಫೆ. 16 : ಕಡಗದಾಳು ಗ್ರಾಮದ ಕಾರ್ನರ್ ಫ್ರೆಂಡ್ಸ್ ವತಿಯಿಂದ ಮೂರನೇ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಫೆ.18 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖರು ಕಡಗದಾಳು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಜೆ 6 ಗಂಟೆಯಿಂದ ಪಂದ್ಯಾಟ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕಳೆದ ಬಾರಿ 16 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ. ಪ್ರತಿ ತಂಡದಲ್ಲಿ ಎರಡು ಅತಿಥಿ ಆಟಗಾರ ರಿಗೆ ಆಡಲು ಅವಕಾಶವಿದ್ದು, ತಂಡಗಳು ಸಂಜೆ 6 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿಕೊಳ್ಳ ಬೇಕು. ಪ್ರಥಮ ಬಹುಮಾನವಾಗಿ 15 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ರೂ.7, 500 ಮತ್ತು ಟ್ರೋಫಿ ನೀಡಲಾಗುವದು.
ಶಾಲಾ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್, ತಾ.ಪಂ ಸದಸ್ಯರಾದ ಅಪ್ರು ರವೀಂದ್ರ, ತುಳುವೆರ ಜನಪದ ಕೂಟದ ಪ್ರಮುಖರಾದ ಬಿ.ಡಿ.ನಾರಾಯಣ ರೈ, ಕಡಗದಾಳು ಗ್ರಾ.ಪಂ ಉಪಾಧ್ಯಕ್ಷರಾದ ಮಾದೇಟಿರ ತಿಮ್ಮಯ್ಯ, ಹಿರಿಯ ವಾಲಿಬಾಲ್ ಆಟಗಾರ ಕೆಚ್ಚೆಟ್ಟಿರ ಮಂಜು ಅಚ್ಚಯ್ಯ, ಕಾಫಿ ವ್ಯಾಪಾರಸ್ಥರಾದ ರಮೇಶ್ ರೈ, ಕಡಗದಾಳು ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಮುಕ್ಕಾಟಿರ ದೇವಯ್ಯ ಹಾಗೂ ಉದ್ಯಮಿ ವಾಸುದೇವ ಉಪಸ್ಥಿತರಿರುವರು ಎಂದು ಪ್ರಮುಖರು ತಿಳಿಸಿದರು.
ಪ್ರತಿವರ್ಷ ಸಮಾರಂಭದಲ್ಲಿ ಪ್ರತಿಭಾನ್ವಿತರನ್ನು ಸನ್ಮಾನಿಸಲಾಗು ತ್ತಿದ್ದು, ಈ ಬಾರಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪಥಸಂಚಲನ ದಲ್ಲಿ ಪಾಲ್ಗೊಂಡಿದ್ದ ಫೀ.ಮಾ. ಕಾರ್ಯಪ್ಪ ಕಾಲೇಜು ಹಾಗೂ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಗುವದೆಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಜೆ.ಯು.ಜಲೀಲ್, ಪೋಷಕರಾದ ಎಂ.ಎಸ್.ಶಂಭಯ್ಯ, ಮಾದೇಟಿರ ತಿಮ್ಮಯ್ಯ ಹಾಗೂ ನಿರ್ದೇಶಕರಾದ ಕೆ.ಕುಜ್ಞಪ್ಪ ಉಪಸ್ಥಿತರಿದ್ದರು.