ಸೋಮವಾರಪೇಟೆ, ಫೆ. 16: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳು ಶಿಕ್ಷಕರುಗಳಿಂದ ಲಂಚದ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಜನಪ್ರತಿನಿಧಿಗಳು ಬಿಇಒ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಗಳ ಸಭೆ ನಡೆಸಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿಪಂ ಸದಸ್ಯರಾದ ಬಿ.ಜೆ.ದೀಪಕ್, ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ ಅವರುಗಳು ಬಿಇಒ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದರು.

ಬಿಇಓ ಅನುಪಸ್ಥಿತಿಯಲ್ಲಿ ನಡೆದ ಕಚೇರಿಯ ವ್ಯವಸ್ಥಾಪಕ ಉತ್ತೇಶ್ ಹಾಗೂ ಸಿಬ್ಬಂದಿಗಳ ಸಭೆಯಲ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಕೆಲ ಸಿಬ್ಬಂದಿಗಳ ವಿರುದ್ಧ ಲಂಚದ ಆರೋಪ ಮಾಡಿದರು.

ಸಿಬ್ಬಂದಿಗಳ ಕೊರತೆಯ ನಡುವೆಯೇ ಕಚೇರಿ ಕೆಲಸವನ್ನು ನಿರ್ವಹಿಸುತ್ತಿದ್ದೇವೆ. ಯಾವ ಶಿಕ್ಷಕರಿಗೂ ಲಂಚದ ಬೇಡಿಕೆಯಿಟ್ಟಿಲ್ಲ. ಶಿಕ್ಷಕರ ಸಂಘದ ಅಧ್ಯಕ್ಷರ ಆರೋಪದಲ್ಲಿ ಹುರುಳಿಲ್ಲ ಎಂದು ಸಿಬ್ಬಂದಿಗಳಾದ ದಿನೇಶ್, ರವೀಶ್ ಸಮಜಾಯಿಸಿಕೆ ಕೊಟ್ಟರು.

ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಶಿಕ್ಷಕರ ಬಾಯಲ್ಲಿ ಲಂಚದ ಪದ ಬರಬಾರದು. ಸಾರ್ವಜನಿಕರಿಗೆ ಶಿಕ್ಷಣ ಇಲಾಖೆಯ ಬಗ್ಗೆ ಇವತ್ತಿಗೂ ಗೌರವವಿದೆ. ಆ ಗೌರವಕ್ಕೆ ಧಕ್ಕೆಯಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಎಚ್ಚರಿಕೆ ನೀಡಿದರು. ಬಿಇಒ ಕಚೇರಿಯಲ್ಲಿ ಶಿಕ್ಷಕರ ಕೆಲಸಗಳು ವಿಳಂಬವಾಗುತ್ತಿವೆ ಎಂಬ ಆರೋಪವಿರುವದರಿಂದ, ಮುಂದಿನ ತಾಪಂ ಕೆಡಿಪಿ ಸಭೆಯಲ್ಲಿ ಪೂರ್ಣ ಮಾಹಿತಿಯನ್ನು ಕೊಡುವಂತೆ ವ್ಯವಸ್ಥಾಪಕರಿಗೆ ಸೂಚಿಸಿದರು.

ತಾಲೂಕಿನ ಶಿಕ್ಷಕ, ಶಿಕ್ಷಕಿಯರಿಗೆ ಬಿಇಒ ಕಚೇರಿಯಿಂದ ಕಿರುಕುಳ ಅಥವಾ ಲಂಚದ ಬೇಡಿಕೆಯಿಟ್ಟರೆ, ಲಿಖಿತ ದೂರನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಸ್ಥಾಯಿ ಸಮಿತಿಗೆ ಸಲ್ಲಿಸುವಂತೆ ಜಿಪಂ ಸದಸ್ಯ ದೀಪಕ್ ಹೇಳಿದರು. ದೂರು ನೀಡುವದಕ್ಕೆ ಯಾರೂ ಭಯಪಡಬಾರದು ಎಂದು ಹೇಳಿದರು.