ಸೋಮವಾರಪೇಟೆ, ಫೆ. 16: 2015-16ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 9.95 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಇತ್ತೀಚಿನ ದಿನಗಳಲ್ಲಿ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಪರಿಣಾಮ 9.95 ಲಕ್ಷ ವೆಚ್ಚದ ಯೋಜನೆ ಅಶುದ್ಧ ನೀರಿನಲ್ಲಿ ಹೋಮವಾಗುವತ್ತ ಹೆಜ್ಜೆಯಿರಿಸುತ್ತಿದೆ.ಸರ್ಕಾರದಿಂದ ಮಂಜೂರಾದ ರೂ. 9.95 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಇಲ್ಲಿನ ಜೇಸೀ ವೇದಿಕೆ ಸಮೀಪ ನಿರ್ಮಾಣ ಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಸಾವಿರಾರು ಮಂದಿ ಪ್ರಯೋಜನ ಪಡೆಯುತ್ತಿದ್ದು, ಇದರ ನಿರ್ವಹಣೆಯ ಜವಾಬ್ದಾರಿ ಕೂಡ ನಿರ್ಮಿತಿ ಕೇಂದ್ರದ್ದಾಗಿದೆ.
ಆದರೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ನಿರ್ಮಿತಿ ಕೇಂದ್ರ ವಿಫಲವಾಗಿದ್ದು, ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಪಟ್ಟಣ ಪಂಚಾಯಿತಿ ಸಹ ಕೇಂದ್ರದತ್ತ ಗಮನಹರಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಪರಿಣಾಮ ಉದ್ಘಾಟನೆ ಗೊಂಡ ಐದಾರು ತಿಂಗಳಿನಲ್ಲಿಯೇ ನೀರಿನ ಘಟಕದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಿಸುವ ಸಿಬ್ಬಂದಿ ಸಮರ್ಪಕ ವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದಿನಂಪ್ರತಿ ನೂರಾರು ಲೀಟರ್ ನೀರನ್ನು ಸಾರ್ವಜನಿಕರು ಕೊಂಡೊ ಯ್ಯುತ್ತಿದ್ದು, ನೀರಿನ ಕ್ಯಾನ್‍ಗಳಲ್ಲಿ ಪಾಚಿ ಕಟ್ಟಿದೆ. ಇದರೊಂದಿಗೆ ಫಿಲ್ಟರ್ ಘಟಕವೂ ಅಶುಚಿತ್ವದಿಂದ ಕೂಡಿದ್ದು, ನಿರ್ವಹಣೆಗೆಂದೇ ನಿರ್ಮಿತಿ ಕೇಂದ್ರದಿಂದ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿ ಈ ಕೇಂದ್ರದಲ್ಲಿ ಇರುವದೇ ಇಲ್ಲ. ತರಹೇವಾರಿ ನಾಣ್ಯಗಳು ಚಲಾವಣೆಯಲ್ಲಿದ್ದು,
(ಮೊದಲ ಪುಟದಿಂದ) ನೀರಿಗಾಗಿ ನಾಣ್ಯಗಳನ್ನು ನೀಡುವದಕ್ಕೂ ಇಲ್ಲಿ ಸಿಬ್ಬಂದಿ ಇರುವದಿಲ್ಲ. ಇದರಿಂದಾಗಿ ಸರ್ಕಾರದ ಯೋಜನೆಯೊಂದು ಹಳ್ಳಹಿಡಿಯುತ್ತಿದೆ ಎಂದು ಆಟೋ ಚಾಲಕರುಗಳಾದ ರಮೇಶ್, ಹಸನಬ್ಬ, ರವಿ, ಕುಮಾರ್ ಸಂಪತ್ ಸೇರಿದಂತೆ ಇತರರು ದೂರಿದ್ದಾರೆ.
ಶುದ್ಧಕುಡಿಯುವ ನೀರಿನ ಘಟಕಕ್ಕೆ ಲಕ್ಷಾಂತರ ರೂಪಾಯಿ ವಿನಿಯೋಗಿ ಸಿದ್ದು, ನಿರ್ವಹಣೆಯ ಕೊರತೆಯಿಂದ ಯೋಜನೆ ಹಳ್ಳಹಿಡಿಯುವತ್ತ ಹೆಜ್ಜೆ ಹಾಕುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ಅಶುಚಿತ್ವ ಎದ್ದುಕಾಣಿ ಸುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿ, ಆರೋಗ್ಯ ನಿರೀಕ್ಷಕರು ಗಮನಹರಿಸಬೇಕಿದೆ.
- ವಿಜಯ್ ಹಾನಗಲ್