ಮಡಿಕೇರಿ, ಫೆ. 16: ಅಂತೂ.., ಇಂತು... ಕಾಲ ಕೂಡಿ ಬಂತು... ಎಂಬ ಮಾತಿನಂತೆ ಕೊನೆಗೂ ಮಡಿಕೇರಿ ಖಾಸಗಿ ಬಸ್ ನಿಲ್ದಾಣಕ್ಕೆ ಕಾಲ ಕೂಡಿ ಬಂದಿದೆ. ನೂತನ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶಾಸಕರು, ಬಸ್ ಮಾಲೀಕರ ವಿರೋಧದ ನಡುವೆಯೂ ಜಿಲ್ಲಾಡಳಿತ ಅನುಮೋದನೆ ನೀಡಿದ್ದು, ಕಾಮಗಾರಿ ಆರಂಭಗೊಂಡಿದೆ. ಇದರಿಂದಾಗಿ ಬಸ್ ನಿಲ್ದಾಣ ಸ್ಥಳಾಂತರವಾಗಬೇಕು ಎನ್ನುವ ಜಿಲ್ಲೆಯ ಜನತೆಯ ಬಹುಕಾಲದ ಕನಸು ನನಸಾದಂತಾಗಿದ್ದು, ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೃಷಿ ವಿವಿಗೆ ಸೇರಿದ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಲಿದೆ.

ನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣ ಈ ಹಿಂದೆ ವಾಹನಗಳ ಸಂಖ್ಯೆ, ಬಸ್‍ಗಳ ಸಂಖ್ಯೆ ಕಡಿಮೆ ಇದ್ದಾಗ ಸಾಕಾಗಿತ್ತು. ಹಿದೊಮ್ಮೆ ಸಾರಿಗೆ ಬಸ್‍ಗಳು ಕೂಡ ಇದೇ ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿದ್ದವು. ಆದರೆ ಬರಬರುತ್ತಾ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಹೆಚ್ಚಾಗಿ ಬಸ್ ನಿಲ್ದಾಣ ಕಿಷ್ಕಿಂಧೆಯಾಗತೊಡಗಿತು. ನಿಲ್ದಾಣ ಇಳಿಜಾರು ಪ್ರದೇಶದಲ್ಲಿರುವದರಿಂದ ಖಾಸಗಿ ಬಸ್‍ಗಳು ಹಿಂಬದಿ ಚಲಿಸಿ ನಿಲುಗಡೆಗೊಳ್ಳುವ ಸಂದರ್ಭ ವಾಹನ ದಟ್ಟಣೆಯಾಗತೊಡಗಿತು. ಮೇಲಿನಿಂದ ಬರುವ ವಾಹನಗಳ ತಾಂತ್ರಿಕ ದೋಷಗಳಿಂದ ಅವಘಡಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಗೊಳಿಸುವ ಬಗ್ಗೆ ಅಂದಿನ ಪುರಸಭೆ, ನಂತರದ ನಗರಸಭೆ, ಜಿಲ್ಲಾಡಳಿತ ತೀರ್ಮಾನ ಕೈಗೊಂಡವು.

ಜಾಗದ ಸಮಸ್ಯೆ

ಬಸ್ ನಿಲ್ದಾಣ ಸ್ಥಳಾಂತರ ಗೊಳ್ಳಬೇಕೆಂಬ ಉದ್ದೇಶ ಖಾಸಗಿ ಬಸ್ ಮಾಲೀಕರು ಸೇರಿದಂತೆ ಎಲ್ಲರಿಗೂ ಇತ್ತಾದರೂ ಸೂಕ್ತ ಜಾಗದ ಸಮಸ್ಯೆ ಎದುರಾಯಿತು. ಅದಾಗಲೇ ಸಾರಿಗೆ ಸಂಸ್ಥೆಯ ನಿಲ್ದಾಣದ ಒಂದು ಬದಿಯಲ್ಲಿ ಅವಕಾಶ ಕೋರಲಾಯಿತಾದರೂ ನಿಯಮಾನುಸಾರ ಸಾಧ್ಯವಿಲ್ಲದೆ ಇರುವದರಿಂದ ಅದು ಕೈಗೂಡಲಿಲ್ಲ. ನಂತರದಲ್ಲಿ ಸನಿಹದಲ್ಲೇ ಇರುವ ಬಾಲಭವನಕ್ಕೆ ಸೇರಿದ ಖಾಲಿ ಜಾಗವನ್ನು ಅಪೇಕ್ಷಿಸಲಾಯಿತು. ಆದರೆ ಬಾಲಭವನದಲ್ಲಿರುವ ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅದಕ್ಕೆ ಮಾನ್ಯತೆ ಸಿಗಲಿಲ್ಲ.

(ಮೊದಲ ಪುಟದಿಂದ) ಅಲ್ಲಿ, ಇಲ್ಲಿ ಹುಡುಕಾಡಿದರೂ ಯಾವದೇ ಜಾಗ ಸಿಗಲಿಲ್ಲ.

ಕೊನೆಗೂ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭ 2008ರಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೃಷಿ ವಿವಿ ಅಧ್ಯಯನ ಕೇಂದ್ರಕ್ಕೆ ಸೇರಿದ ಮೂರು ಎಕರೆ ಜಾಗವನ್ನು ಗುರುತಿಸಿ ಬಸ್ ನಿಲ್ದಾಣಕ್ಕೆಂದು ಮೀಸಲಿರಿಸಲಾಯಿತು. ಇದಕ್ಕೆ ಪರ್ಯಾಯವಾಗಿ ಕೃಷಿ ವಿವಿಗೆ ಬೇರೆ ಕಡೆ ಜಾಗ ಕೂಡ ನೀಡಲಾಯಿತು. ಬಸ್ ನಿಲ್ದಾಣಕ್ಕೆ ಸರಕಾರದಿಂದ ಅನುದಾನ ಕೂಡ ಬಿಡುಗಡೆಯಾಯಿತು.

ಅಡೆ-ತಡೆ

ಈ ನಡುವೆ ಕೃಷಿ ವಿವಿ ಮೂಲಕ ಭತ್ತ ತಳಿ ಸಂಶೋಧನಾ ಮಾಡುವ ಸ್ಥಳವಾಗಿದ್ದು, ಇಲ್ಲಿ ಬಸ್ ನಿಲ್ದಾಣಕ್ಕೆ ಅವಕಾಶ ನೀಡಬಾರದೆಂದು ಕಾನೂರಿನ ಎಸ್.ಪಿ. ಮಹದೇವಪ್ಪ (ಈಗ ದಿವಂಗತ) ಸೇರಿದಂತೆ ಇತರರು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಸುಮಾರು ಎರಡು ವರ್ಷಗಳ ಕಾಲ ವ್ಯಾಜ್ಯ ನಡೆದು ಕೊನೆಗೂ ತಡೆಯಾಜ್ಞೆ ತೆರವಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಹಸಿರು ನಿಶಾನೆ ದೊರಕಿತು. ಅಷ್ಟರಲ್ಲಾಗಲೇ ಬಿಜೆಪಿ ಆಡಳಿತ ಕೊನೆಯಾಗಿ ಕಾಂಗ್ರೆಸ್ ಆಡಳಿತ ಜಾರಿಗೆ ಬಂದಿತು. ಹಿಂದಿನ ಸರಕಾರ ರೂ. 4 ಕೋಟಿ ಅನುದಾನ ಮೀಸಲಿಟ್ಟಿದ್ದಾದರೂ ಅನುದಾನ ಬಿಡುಗಡೆಗೆ ಮೀನಾ ಮೇಷ ಎಣಿಸುವಂತಾಯಿತು.

ಶಾಸಕರ ವಿರೋಧ

ಈ ಹಿಂದೆ ಬಿಜೆಪಿ ಸರಕಾರ ಇದ್ದಾಗಲೇ ಶಾಸಕದ್ವಯರ ಪ್ರಯತ್ನದಿಂದಲೇ ಜಾಗ ಮಂಜೂರಾಯಿತಾದರೂ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಶಾಸಕ ಅಪ್ಪಚ್ಚು ರಂಜನ್ ವಿರೋಧ ವ್ಯಕ್ತಪಡಿಸಿದರು. ಈ ಹಿಂದೆ ಸ್ಥಳ ಗುರುತಿಸುವ ಸಂದರ್ಭ ವಾಹನ ದಟ್ಟಣೆ, ಪ್ರವಾಸಿಗರ ಆಗಮನ ಕಡಿಮೆಯಿತ್ತು. ಇದೀಗ ದುಪ್ಪಟ್ಟಾಗಿದೆ. ಹಾಗಾಗಿ ತೊಂದರೆಯಾಗಲಿದೆ ಎಂಬದು ಶಾಸಕರ ವಾದವಾಗಿತ್ತು. ಬದಲಿಗೆ ಸಾರಿಗೆ ಸಂಸ್ಥೆ ಬಳಿಯ ಎಪಿಎಂಸಿ ಯಾರ್ಡ್‍ನಲ್ಲಿ ನಿಲ್ದಾಣ ಮಾಡಬಹುದೆಂಬ ಅಭಿಪ್ರಾಯವಾಗಿತ್ತು.

ಖಾಸಗಿ ಬಸ್ ಮಾಲೀಕರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಅವರುಗಳ ವಿರೋಧವಿದೆ. ನಿಲ್ದಾಣ ದೂರವಾಗಲಿದೆ. ನಗರದೊಳಗೆ ಸಂಚಾರ ದಟ್ಟಣೆಯಾಗಲಿದೆ ಎಂಬದು ಅವರುಗಳ ವಾದ.

ಈ ನಡುವೆ ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಅನುಮೋದನೆ ನೀಡಿರಲಿಲ್ಲ. ಅವರ ಕನಸು ಬೇರೆಯೇ ಆಗಿತ್ತು. ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಪ್ಲೈಓವರ್ ಮಾದರಿಯಲ್ಲಿ ಎರಡೂ ಬಸ್ ನಿಲ್ದಾಣಗಳನ್ನು ಒಂದೇ ಕಡೆ ನಿರ್ಮಿಸುವ ಬಗ್ಗೆ ಚಿಂತನೆ ಹೊಂದಿದ್ದರು. ಈಗ ಇರುವ ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಇತರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಿದ್ದರು.

ಜಿಲ್ಲಾಧಿಕಾರಿ ಅನುಮತಿ

ಆದರೆ ಈಗಿನ ಆಡಳಿತ, ನಗರಸಭೆ ಆಡಳಿತ ಖಾಸಗಿ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರೂ. 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಯೋಜನೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅನುಮತಿ ನೀಡಿದ್ದಾರೆ. ಇದೀಗ ಉದ್ದೇಶಿತ ಕೃಷಿ ವಿವಿ ಜಾಗದಲ್ಲಿ ಮಣ್ಣು ಸಮತಟ್ಟು ಮಾಡುವ ಕಾಮಗಾರಿ ನಡೆಯುತ್ತಿದೆ. ಮೈಸೂರಿನ ನಾಗರಾಜ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದು, ಕೆಲಸ ಪ್ರಾರಂಭಿಸಿದ್ದಾರೆ. ಶೀಘ್ರದಲ್ಲೇ ಬಸ್ ನಿಲ್ದಾಣ ನಿರ್ಮಾಣವಾಗಲಿದ್ದು, ಜನತೆಯ ಬೇಡಿಕೆ ಈಡೇರಲಿದೆ.