ಗೋಣಿಕೊಪ್ಪಲು, ಫೆ. 16: ಶಾಲೆಗೆ ಅಣ್ಣನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರನೆ ಎದುರಾದ ಕಾಡಾನೆಗೆ ಗಾಬರಿಯಿಂದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.ಇಲ್ಲಿನ ಅನುದಾನಿತ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿನಿ ಕಳತ್ಮಾಡು ನಿವಾಸಿ ಕಾವ್ಯ, ಸ್ಥಳೀಯ ಬ್ಯಾಂಕಿನ ಸಿಬ್ಬಂದಿ ಮಾದೇವ್ ಗಾಯಗೊಂಡ ವರು. ಬೆಳಗ್ಗೆ 9.30ಕ್ಕೆ ಶಾಲೆಗೆ ಅಣ್ಣನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಕಳತ್ಮಾಡು ಜಂಕ್ಷನ್ ಸಮೀಪ ಈ ಘಟನೆ ನಡೆದಿದೆ.ಸಮೀಪದ ಕಾಫಿ ತೋಟದಿಂದ ಆನೆ ರಸ್ತೆ ಮಧ್ಯಕ್ಕೆ ಬಂದಿದೆ. ದಿಢೀರನೆ ಎದುರಾದ ಆನೆಯನ್ನು ಕಂಡು ಗಾಬರಿಗೊಂಡ ಬೈಕ್ ಸವಾರ ಮಾದೇವ ನಿಯಂತ್ರಣ ತಪ್ಪಿ ನೇರವಾಗಿ ಆನೆಯ ಸೊಂಡಿಲಿಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದ್ದಾರೆ. ಈ ಸಂದÀರ್ಭ ಆನೆ ಮತ್ತಷ್ಟು ಗಾಬರಿಯಿಂದ ಕಾಫಿ ತೋಟದ ಒಳಗೆ ಓಡಿದೆ.
(ಮೊದಲ ಪುಟದಿಂದ) ಬೈಕ್‍ನೊಂದಿಗೆ ನೆಲಕ್ಕೆ ಬಿದ್ದ ಸಂದರ್ಭ ಹಿಂಬದಿ ಕುಳಿತಿದ್ದ ವಿದ್ಯಾರ್ಥಿಯ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಬೈಕ್ ಸವಾರ ಮಾದೇವನ ಮೂಗು ಹಾಗೂ ಕೈಗಳಿಗೆ ಗಾಯಗಳಾಗಿದ್ದು, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಪಂದಿಯಂಡ ಉತ್ತಯ್ಯ ಗಾಯಾಳುಗಳಿಗೆ 10 ಸಾವಿರ ರೂ ಪರಿಹಾರ ಧನವನ್ನು ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸಹಾಯಧನ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ಆನೆ ಕಂಡು ಬಂದ ಕಳತ್ಮಾಡು ಜಂಕ್ಷನ್ ಸಮೀಪದ ಕಾಫಿ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಆನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಕ್ಕೆ ತಕ್ಷಣವೇ ಮುಂದಾದ ಆರ್.ಎಫ್.ಒ ಉತ್ತಪ್ಪ ಅವರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಚಿತ್ರ, ವರದಿ: ಎನ್.ಎನ್. ದಿನೇಶ್