ಮಡಿಕೇರಿ, ಫೆ. 16: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಸದಸ್ಯತ್ವ ಅಭಿಯಾನದ ವಿಶೇಷ ಸಭೆ ಮೂರ್ನಾಡು ಹೋಬಳಿ ಒಕ್ಕಲಿಗ ಸಮಿತಿಯ ಸಹಭಾಗಿತ್ವದಲ್ಲಿ ಮೂರ್ನಾಡಿನ ಕೊಡವ ಸಮಾಜದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಪಿ. ಕೃಷ್ಣರಾಜು ವಹಿಸಿದ್ದರು. ಸಂಘದ ಸದಸ್ಯತ್ವ ನೋಂದಣಿ ಅಭಿಯಾನದ ವಿಶೇಷ ಸಭೆಯನ್ನು ಒಕ್ಕಲಿಗ ಮತಸ್ಥರಾದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘದ ಸಂಘಟನೆ ಹಾಗೂ ಸಂಘದ ಮುಂದಿನ ಕಾರ್ಯ ಚಟುವಟಿಕೆ ಮತ್ತು ಒಕ್ಕಲಿಗ ಜನಾಂಗದವರ ಒಗ್ಗಟ್ಟಿನ ಬಲ ಪ್ರದರ್ಶನ ಕುರಿತಂತೆ ಸಂಘದ ಸ್ಥಾಪಕ ಅಧ್ಯಕ್ಷರೂ, ಹಾಲಿ ಗೌರವ ಅಧ್ಯಕ್ಷರೂ ಆದ ವಕೀಲ ಎಂ.ಎ. ನಿರಂಜನ್, ಸಂಘದ ಹಾಲಿ ಕಾರ್ಯಾಧ್ಯಕ್ಷ ವಿ.ಪಿ. ಸುರೇಶ್, ತಾಲೂಕು ಒಕ್ಕಲಿಗ ಸಂಘದ ಮೂರ್ನಾಡು ಹೋಬಳಿ ಸಮಿತಿಯ ಗೌರವಾಧ್ಯಕ್ಷ ಕೆ.ವಿ. ವೆಂಕಟೇಶ್, ಅಧ್ಯಕ್ಷ ಮೂರ್ತಿಪ್ರಸಾದ್, ಸಲಹೆಗಾರರಾದ ಎಸ್.ಎಲ್. ಬಸವರಾಜ್ ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಒಕ್ಕಲಿಗ ಕುಲಬಾಂಧವರು ಸಂಘದ ಪ್ರಗತಿಗೆ ಸಲಹೆಗಳನ್ನು ನೀಡಿದರು.
ಬೆಂಗಳೂರು ನಗರವನ್ನು ಆಳಿದ ನಾಡ ಪ್ರಭು ಒಕ್ಕಲಿಗ ಜನಾಂಗದ ನೆಚ್ಚಿನ ನಾಯಕ ಕೆಂಪೇಗೌಡ ಅವರ ಹುಟ್ಟು ಹಬ್ಬವನ್ನು ಸರಕಾರದಿಂದ ಪ್ರತಿವರ್ಷ ಆಚರಿಸುವಂತೆ ಮನವಿ ಮಾಡಿಕೊಳ್ಳುವ ನಿರ್ಣಯವನ್ನು ಸಭೆ ಅಂಗೀಕರಿಸಿತು.
ವೇದಿಕೆಯಲ್ಲಿ ಸತ್ಯನಾರಾಯಣ, ಲಲಿತ, ಕೆರೆಮನೆ ವಿಜಯಲಕ್ಷ್ಮಿ, ಸಂಘದ ನಿರ್ದೇಶಕರುಗಳಾದ ಮಡಿಕೇರಿ ನಗರಸಭೆ ಸದಸ್ಯೆ ಐ.ಜಿ. ಶಿವಕುಮಾರಿ, ಉಪಾಧ್ಯಕ್ಷ ವಿಜಯಕುಮಾರ್, ಖಜಾಂಚಿ ರಮೇಶ್, ಸಹ ಕಾರ್ಯದರ್ಶಿ ವಿ.ಎಸ್. ಮನು ಕುಮಾರ್, ಜಿಲ್ಲಾ ಒಕ್ಕಲಿಗ ಸಂಘದ ಕಾರ್ಯದರ್ಶಿ ಕುಶಾಲಪ್ಪ, ಧರ್ಮೇಂದ್ರ, ಸಂಘಟನಾ ಕಾರ್ಯದರ್ಶಿ ಉಮೇಶ್, ನಿರ್ದೇಶಕರಾದ ಹೇಮಂತ್, ಮೋಹನ್, ವಿ.ಜಿ. ಸತೀಶ್ ಮೊದಲಾದವರು ಹಾಜರಿದ್ದರು.
ಕವಿತ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎ. ಮಂಜುನಾಥ್ ಸ್ವಾಗತಿಸಿದರು. ಸಂಘದ ಸಲಹೆಗಾರ ಎಸ್.ಎಲ್. ಬಸವರಾಜ್ ವಂದಿಸಿದರು.