ಕುಶಾಲನಗರ, ಫೆ. 16: ಬದ್ಧ ವೈರಿಗಳಂತೆ ಪರಸ್ಪರ ಕೆಸರೆರಚಾಟ ದಲ್ಲಿ ತೊಡಗಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಸೋಮವಾರಪೇಟೆ ತಾಲೂಕಿನಲ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸು ತ್ತಿವೆ ಎಂದು ಯುವ ಜನತಾದಳ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಆರೋಪಿಸಿದ್ದಾರೆ.
ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಜಾತ್ಯತೀತ ನಿಲುವಿಗೆ ವಿರುದ್ಧವಾಗಿ ಕಾಂಗ್ರೆಸ್ ಕೋಮು ವಾದಿ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರದ ಗದ್ದುಗೆ ಏರಿದೆ. ಸದಾ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದ ಅವರು, ಜಾತ್ಯತೀತ ನಿಲುವಿನ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಡಿಎಸ್ ಪಕ್ಷ ಹಾಗೂ ನಾಯಕರುಗಳ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರಿಗೆ ಮಾತನಾಡುವ ಯಾವದೇ ನೈತಿಕ ಹಕ್ಕಿಲ್ಲ ಎಂದರು.
ಕುಶಾಲನಗರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭ ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಪ್ರಮುಖರಿಗೆ ಆದೇಶ ನೀಡಿದ್ದರು. ತಪ್ಪಿದ್ದಲ್ಲಿ ಅಂತಹವರ ಮೇಲೆ ಕ್ರಮಕೈಗೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. ಅದರಂತೆ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಕಾಂಗ್ರೆಸ್ ಮುಂದಾಗಿತ್ತು ಎಂದು ವಿಶ್ವ ಮಾಹಿತಿ ನೀಡಿದರು. ಜೆಡಿಎಸ್ ನಾಯಕ ಜೀವಿಜಯ ಏಕಾಂಗಿ ಯಾಗಿ ಚುನಾವಣೆ ಎದುರಿಸುವ ಮೂಲಕ ಪಕ್ಷದ ತತ್ವ ಸಿದ್ಧಾಂತಗಳಿಗೆ ಬೆಲೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಪಕ್ಷದ ತತ್ವ ಸಿದ್ಧಾಂತ ಗಳನ್ನು ಗಾಳಿಗೆ ತೂರಿ ಬಿಜೆಪಿ ಯೊಂದಿಗೆ ಕೈಜೋಡಿಸಿ ಅಧ್ಯಕ್ಷ ಸ್ಥಾನಗಳಿಸಿದ್ದಾರೆ ಹೊರತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಅವರ ಸಮರ್ಥನೆಯಂತೆ ಸ್ವಂತ ಬಲದಿಂದಲ್ಲ ಎಂದು ದೂರಿದರು.
ವಿಧಾನಸಭಾ ಚುನಾವಣೆ ಸಂದರ್ಭ ಜೆಡಿಎಸ್ ನಾಯಕ ಜೀವಿಜಯ ಬಿಜೆಪಿಯ ಸುನಿಲ್ ಸುಬ್ರಮಣಿ ಅವರಿಗೆ ಸಹಕಾರ ನೀಡಿದ್ದಾರೆ ಎಂಬ ಕಾಂಗ್ರೆಸಿಗರ ಆರೋಪ ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದರು.
ಗೋಷ್ಠಿಯಲ್ಲಿ ಕುಶಾಲನಗರ ಹೋಬಳಿ ಜೆಡಿಎಸ್ ಪ್ರಮುಖ ಎಂ.ಎಸ್. ರಾಜೇಶ್, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಜೆ.ಸಿ. ತಮ್ಮಯ್ಯ ಇದ್ದರು.