ಕುಶಾಲನಗರ, ಫೆ 16: ರಾಜ್ಯದಲ್ಲಿ ಕಾಡಾನೆಗಳ ಹತ್ಯೆ ಪ್ರಕರಣಗಳನ್ನು ಸಂಪೂರ್ಣ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ ಎಂದು ಧಾರವಾಡದ ಅರಣ್ಯ ರಕ್ಷಕರ ತರಬೇತಿ ಕೇಂದ್ರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಧಾದೇವಿ ತಿಳಿಸಿದ್ದಾರೆ. ಕುಶಾಲನಗರ ಅರಣ್ಯ ರಕ್ಷಕರ ತರಬೇತಿ ಕೇಂದ್ರದಲ್ಲಿ 1ನೇ ತಂಡದ ಆನೆ ಕವಾಡಿಗರ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಹಗಲು ರಾತ್ರಿಯೆನ್ನದೆ ಕರ್ತವ್ಯದಲ್ಲಿ ತೊಡಗಿದ್ದು ಉತ್ತಮ ಮಟ್ಟದ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ 51 ಮಂದಿ ಆನೆ ಕವಾಡಿಗರಿಗೆ ಇಲಾಖೆ ಮೂಲಕ ತರಬೇತಿ ನೀಡುವ ಕಾರ್ಯಕ್ರಮ ನಡೆಯುತ್ತಿದ್ದು ಪರಂಪರಾಗತವಾಗಿ ಬಂದಿರುವ ಸಿಬ್ಬಂದಿಗಳೊಂದಿಗೆ ನೇರವಾಗಿ ನೇಮಕಗೊಂಡಿರುವ ನೌಕರರು ಏಕಕಾಲದಲ್ಲಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಮುಂದಾಗಿರುವದಾಗಿ ತಿಳಿಸಿದರು. ಯಾವದೇ ವಿದ್ಯಾಭ್ಯಾಸದ ಅಗತ್ಯವಿಲ್ಲದ ಏಕೈಕ ಸರಕಾರಿ ಕೆಲಸವಾಗಿರುವ ಕಾವಾಡಿಗರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತರಬೇತಿ ಕೇಂದ್ರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎಸ್.ಎಸ್ ಮೂರ್ತಿ ಮಾತನಾಡಿ, ವೈಜ್ಞಾನಿಕವಾಗಿ ಆನೆಗಳನ್ನು ಪಳಗಿಸುವ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಇಲಾಖೆಯ ನಿಯಮ, ಶಿಸ್ತು ಮತ್ತಿತರ ಚಟುವಟಿಕೆಗಳ ಬಗ್ಗೆ 3 ತಿಂಗಳ ಕಾಲ ತರಬೇತಿ ನೀಡಲಾಗುವದು ಎಂದು ಮಾಹಿತಿ ನೀಡಿದರು.
ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ ಅವರು ಆನೆ ಪಳಗಿಸುವ ಕಾರ್ಯ ಒಂದು ವಿಶಿಷ್ಠ ಕಲೆಯಾಗಿದ್ದು, ಕಾವಾಡಿಗರಿಂದ ಇಲಾಖೆಗೆ ವಿಶೇಷ ಸೇವೆ ದೊರಕುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಶಾಲನಗರ ಅರಣ್ಯ ರಕ್ಷಕರ ತರಬೇತಿ ಕೇಂದ್ರದ ಮುಖ್ಯಸ್ಥರಾದ ಎಸಿಎಫ್ ರಾಮಕೃಷ್ಣಪ್ಪ, ತರಬೇತಿ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ದುಬಾರೆ, ಸಕ್ರಬೈಲು, ಮತ್ತಿಗೋಡು, ಬಂಡೀಪುರ, ರಾಣಿಗೇಟ್ ಮುಂತಾದ ಕಡೆಗಳ 51 ಕಾವಾಡಿಗರು ಪಾಲ್ಗೊಂಡಿದ್ದಾರೆ.