ಮಡಿಕೇರಿ, ಫೆ. 16: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ದಿಂದ ಕಾಂಗ್ರೆಸ್‍ನ್ನು ದೂರ ಇಡಲು ಜೆಡಿಎಸ್ ನಾಯಕರು ಮಾಡಿದ ಕುತಂತ್ರ ಖಂಡನೀಯವೆಂದು ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆಯ ಹಿರಿಯ ಸದಸ್ಯ ಹೆಚ್. ಎಂ. ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ದಲಿತ ಪ್ರತಿನಿಧಿ ಮುಳ್ಳುಸೋಗೆಯ ರಮೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸೋಮವಾರಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎಂ. ಲೋಕೇಶ್ ಕುಮಾರ್ ಮಾಡಿದ ಪ್ರಯತ್ನ ಸ್ವಾಗತಾರ್ಹವೆಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಜಿಲ್ಲೆಯ ಪ್ರಮುಖ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಿರುವ ಈ ಸಂದರ್ಭದಲ್ಲಿ ಕುಶಾಲನಗರ ಎಪಿಎಂಸಿಯಲ್ಲಿ ಅಧಿಕಾರ ಪಡೆಯುವಂತೆ ಮಾಡಿದ ಪ್ರಯತ್ನ ಶ್ಲಾಘನೀಯ ಎಂದು ನಂದ ಕುಮಾರ್ ತಿಳಿಸಿದ್ದಾರೆ. ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರ ಬಳಿಗೆ ಕೊಂಡೊಯ್ಯುವ ಕಾರ್ಯವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡಲಿದೆ ಎಂದು ನಂದ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.