ಮಡಿಕೇರಿ, ಫೆ. 16: ದಿಡ್ಡಳ್ಳಿಯ 528 ನಿರಾಶ್ರಿತ ಗಿರಿಜನ ಕುಟುಂಬ ಗಳಿಗೆ ಈಗಾಗಲೇ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದ್ದು, ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಜೋಜ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪುನರ್ ವಸತಿ ಸಮಿತಿ ಸಭೆಯಲ್ಲಿ ತೀರ್ಮಾನಿಸ ಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಈಗಾಗಲೇ ಬಸವನಹಳ್ಳಿಯಲ್ಲಿ 181, ರಾಂಪುರ 171 ಹಾಗೂ ಕೆದಮುಳ್ಳೂರು ವ್ಯಾಪ್ತಿಯಲ್ಲಿ 176 ಒಟ್ಟು 528 ಕುಟುಂಬಗಳಿಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಬಡಾವಣೆ ನಿರ್ಮಾಣ ಮಾಡಿ, ಮನೆ ನಿರ್ಮಾಣಕ್ಕೆ ಪ್ರಥಮಾದ್ಯತೆ ಮೇಲೆ ಕ್ರಮಕೈಗೊಳ್ಳಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಇಲ್ಲಿನ ಗಿರಿಜನರಿಗೆ ಪುನರ್ ವಸತಿ ಕಲ್ಪಿಸುವದರ ಜೊತೆಗೆ ಸ್ವಯಂ ಉದ್ಯೋಗ ಕಲ್ಪಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಟೈಲರಿಂಗ್ ತರಬೇತಿ, ಮರದ ಪೀಠೋಪಕರಣ ತಯಾರಿಕೆ ಸೇರಿದಂತೆ ಸ್ವ ಉದ್ಯೋಗಕ್ಕೆ ಸಹಕರಿಸಬೇಕಿದೆ. ಹಾಗೆಯೇ ವಿವಿಧ ಇಲಾಖೆಗಳಿಂದ ಗಿರಿಜನರಿಗೆ ದೊರೆಯುವ ಸೌಲಭ್ಯಗಳನ್ನು ತಲುಪಿಸುವದು. ಮತ್ತಿತರ ಸಂಬಂಧ ಚರ್ಚಿಸಲಾಯಿತು.

ಮೂಲ ನಿವಾಸಿ ಗಿರಿಜನ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಮಕ್ಕಳು ಶಿಕ್ಷಣ ಪಡೆದಾಗ ಮುಖ್ಯವಾಹಿನಿಗೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ನೂತನ ಬಡಾವಣೆಯಲ್ಲಿ ಅಂಗನವಾಡಿ, ಶಾಲೆ ತೆರೆಯಲು ಕ್ರಮ ತೆಗೆದುಕೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಿರಿಜನರಲ್ಲಿ ಅಭಿವೃದ್ಧಿ ಕಾಣಬೇಕಾದರೆ ಅವರನ್ನು ಮುಖ್ಯವಾಹಿನಿಗೆ ತರಬೇಕಿದೆ. ಆ ನಿಟ್ಟಿನಲ್ಲಿ ವಸತಿ ಜೊತೆಗೆ ಮೂಲಭೂತ ಸೌಕರ್ಯ, ಶಿಕ್ಷಣದ ಸೌಲಭ್ಯ ಮತ್ತು ಅವರಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಕಾರ್ಯಕ್ರಮ ರೂಪಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ನಿವೇಶನ ಹಂಚಿಕೆ ನಂತರ ಹಕ್ಕು ವಿತರಿಸುವದರ ಜೊತೆಗೆ ಮನೆ ನಿರ್ಮಿಸಿ ಸ್ವ ಉದ್ಯೋಗ ಕೈಗೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಸಲಹೆ ಮಾಡಿದರು.

ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರು ಐಟಿಡಿಪಿ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೆಯೇ ವಿವಿಧ ಇಲಾಖೆಗಳ ಮೂಲಕ ಸೌಲಭ್ಯ ಗಳನ್ನು ತಲುಪಿಸಲು ಪ್ರಯತ್ನಿಸ ಬೇಕಿದೆ ಎಂದು ಹೇಳಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಾಶ್ ದಿಡ್ಡಳ್ಳಿ ಮೂಲ ನಿವಾಸಿ ಗಿರಿಜನರಿಗೆ ಪುನರ್ ವಸತಿ ಕಲ್ಪಿಸುವ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ. ಯೋಜನಾ ನಿರ್ದೇಶಕರಾದ ಸಿದ್ದಲಿಂಗ ಮೂರ್ತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಶೇನ್, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಭೀರ್ ಪಾಷ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ತಾಲೂಕು ವಿಸ್ತರಣಾಧಿಕಾರಿ ಲೋಹಿತ್ ಇತರರು ಇದ್ದರು.

ಪುನರ್ ವಸತಿ ಸಮಿತಿ ರಚನೆ

ಜಿಲ್ಲೆಯ ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿನ ಗಿರಿಜನ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪುನರ್ ವಸತಿ ಸಮಿತಿ ರಚನೆ ಮಾಡಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿ.ಪಂ.ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ವಿಭಾಗಾಧಿ ಕಾರಿ ಸದಸ್ಯರುಗಳು, ಜಿಲ್ಲಾಧಿಕಾರಿ ಅವರಿಂದ ನಾಮ ನಿರ್ದೇಶನ ಗೊಂಡ ಇಬ್ಬರು ನಿರಾಶ್ರಿತ ಕುಟುಂಬ ಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ನಾಮ ನಿರ್ದೇಶನ ಗೊಂಡ ಒಬ್ಬ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸದಸ್ಯ ರಾಗಿರುತ್ತಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಅವರು ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.