ಗೋಣಿಕೊಪ್ಪಲು, ಫೆ. 16: ವೀರಾಜಪೇಟೆ ತಾಲೂಕಿನ ಸಮಗ್ರ ಬಲಿಜ ಜನಸಂಖ್ಯೆಯನ್ನು ದಾಖಲಾತಿ ಮಾಡುವ ನಿಟ್ಟಿನಲ್ಲಿ ಮಾರ್ಚ್ ಮೊದಲ ವಾರದಿಂದ ಬೆಕ್ಕೆಸೊಡ್ಲೂರು ವಿನಿಂದ ಬಲಿಜ ಜನಾಂಗದ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗುವದು, ತಾಲೂಕಿನ ಬಲಿಜ ಜನಾಂಗದ ಗಣತಿ ಕಾರ್ಯ ಮುಗಿದ ನಂತರ ವೀರಾಜಪೇಟೆ ಬಲಿಜ ಸಮಾಜ ಸಭೆಯನ್ನು ಏಪ್ರೀಲ್ ಅಥವಾ ಮೇ ತಿಂಗಳಿನಲ್ಲಿ ಏರ್ಪಡಿಸಲಾಗುವದು ಎಂದು ವೀರಾಜಪೇಟೆ ತಾಲೂಕು ಬಲಿಜ ಸಮಾಜದ ನೂತನ ಅಧ್ಯಕ್ಷ ಗಣೇಶ್ ನಾಯ್ಡು ಎಸ್.ಕೆ. ಮಾಹಿತಿ ನೀಡಿದರು.

ವೀರಾಜಪೇಟೆ ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಸ್ಥಾನ ಆವರಣದಲ್ಲಿ ಜರುಗಿದ ತಾಲೂಕು ನಿರ್ದೇಶಕರ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 38 ಗ್ರಾಮ ಪಂಚಾಯಿತಿಗಳಿದ್ದು ಎಲ್ಲ ಪಂಚಾಯಿತಿಗಳಲ್ಲಿಯೂ ಬಲಿಜ ಜನಾಂಗ ವಾಸವಿರುವ ಬಗ್ಗೆ ಅಂಕಿ ಅಂಶ ಕಲೆ ಹಾಕಲಾಗುವದು ಎಂದು ಹೇಳಿದರು.

ವೀರಾಜಪೇಟೆ ತಾಲೂಕಿನ ಬಲಿಜ ಯುವಕ ಎಸ್.ಕೆ. ಕುಮಾರ್ (40) ಬೆಂಗಳೂರಿನಲ್ಲಿ ನೆಲೆಸಿದ್ದು, ಇತ್ತೀಚೆಗೆ ಅನಾರೋಗ್ಯದಿಂದ ಮರಣ ಹೊಂದಿದ್ದು, ಚಿಕಿತ್ಸೆಗಾಗಿ ಸುಮಾರು ರೂ.7 ಲಕ್ಷದಷ್ಟು ಮೊತ್ತ ಖರ್ಚಾಗಿದ್ದು ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷರ ಪ್ರಯತ್ನದ ಮೂಲಕ ಬೆಂಗಳೂರು ಮೇಯರ್ ಜಿ.ಪದ್ಮಾವತಿ ಆರೋಗ್ಯ ನಿಧಿಯಿಂದ ರೂ.1.50 ಲಕ್ಷ ಮೊತ್ತವನ್ನು ದಿ.ಕುಮಾರ್ ಪತ್ನಿ( ಗೋಣಿಕೊಪ್ಪಲು ಯುವತಿ) ಖಾತೆಗೆ ಜಮೆ ಮಾಡಲಾದ ವಿಶೇಷ ಪ್ರಯತ್ನ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊಡಗು ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರ ವಿಶೇಷ ಪ್ರಯತ್ನ, ರಾಜ್ಯ ಬಲಿಜ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್‍ರಾಮಯ್ಯ, ಕುಮಾರ್ ಸ್ನೇಹಿತರು, ಬಂಧುಗಳು ಮತ್ತು ಆಸ್ಪತ್ರೆ ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ‘ಬಿಲ್’ ಮೊತ್ತದಲ್ಲಿಯೂ ಭಾರೀ ರಿಯಾಯಿತಿ ಮಾಡಿರುವ ಬಗ್ಗೆ ಗಣೇಶ್ ನಾಯ್ಡು ಮಾಹಿತಿ ನೀಡಿದರು.

ಗಣತಿ ಕಾರ್ಯ ಪೂರ್ಣಗೊಂಡ ನಂತರ ವೀರಾಜಪೇಟೆಯಲ್ಲಿ ನಡೆಯುವ ಬಲಿಜ ಸಮಾವೇಶದ ಸಂದರ್ಭ ಕೊಡಗು ಉಸ್ತುವಾರಿ ಸಚಿವ ಸೀತಾರಾಮ್, ಬೆಂಗಳೂರು ಮೇಯರ್ ಜಿ.ಪದ್ಮಾವತಿ, ರಾಜ್ಯ ಬಲಿಜ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ರಾಮಯ್ಯ, ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮುಂತಾದ ಗಣ್ಯರನ್ನು ಸನ್ಮಾನಿಸ ಲಾಗುವದು. ಇದೇ ಸಂದರ್ಭ ತಾಲೂಕು ಹಾಗೂ ಜಿಲ್ಲೆಯ ಬಲಿಜ ಸಾಧಕರನ್ನೂ ಗುರುತಿಸಿ ಸನ್ಮಾನಿಸುವ ಉದ್ದೇಶವಿದೆ ಎಂದು ಹೇಳಿದರು.

ಮಾರ್ಚ್ ತಿಂಗಳಿನಲ್ಲಿ ಸಮಾಜದ ನೋಂದಾವಣೆ ಕಾರ್ಯ ಪೂರ್ಣಗೊಳ್ಳಲಿದ್ದು ತಾಲೂಕಿನ ಜನಾಂಗದ ಸದಸ್ಯತನ ಆಂದೋಲನವನ್ನೂ ಆರಂಭಿಸ ಲಾಗುವದು. ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುವ ಬಲಿಜ ವಿದ್ಯಾಭಿವೃದ್ಧಿ ಸಂಘ ಹಾಗೂ ಕ್ಷೇಮನಿಧಿಗೂ ತಾಲೂಕಿನಿಂದ ಪೂರಕ ಸಹಕಾರ ನೀಡಲು ಮನವಿ ಮಾಡಿದರು.

ಕೊಡಗು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಈಗಾಗಲೇ ಮೂರು ತಾಲೂಕು ಪ್ರವಾಸ ಕಾರ್ಯಕ್ರಮ ಪೂರ್ಣಗೊಂಡಿದ್ದು ಮೊದಲಿಗೆ ಮಡಿಕೇರಿ ಮಯೂರ ವ್ಯಾಲಿ ವ್ಯೂ, ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ಜಿಲ್ಲಾ ಬಲಿಜ ಸಮಾಜದ ಪೂರ್ವಭಾವಿ ಸಭೆ ನಡೆದಿದ್ದು ಮುಂದಿನ ಹಂತವಾಗಿ ಕುಶಾಲನಗರದಲ್ಲಿ ಜಿಲ್ಲಾ ಬಲಿಜ ಸಮಾಜ ನಿರ್ದೇಶಕರ ಅಂತಿಮ ಪಟ್ಟಿ ಸಿದ್ದಗೊಳಿಸುವ ಸಲುವಾಗಿ ಸಭೆ ಕರೆಯಲಾಗಿದೆ. ವೀರಾಜಪೇಟೆ ತಾಲೂಕಿನಂತೆಯೇ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿಯೂ ಬಲಿಜ ಗಣತಿ ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗುವದು.ಕಳೆದ 40 ವರ್ಷಗಳಿಂದಲೂ ಕೊಡಗಿನಲ್ಲಿ ಬಲಿಜ ಸಂಘ ಅಸ್ತಿತ್ವದಲ್ಲಿದ್ದರೂ ಜನಾಂಗದ ನಡುವೆ ಒಗ್ಗಟ್ಟು, ಒಮ್ಮತ ಮೂಡದ ಹಿನ್ನೆಲೆ ಹಲವು ವರ್ಷಗಳಿಂದಲೂ ಮಹಾಸಭೆಯೇ ನಡೆದಿರುವದಿಲ್ಲ. ಈ ನಿಟ್ಟಿನಲ್ಲಿ ಮೂರು ತಾಲೂಕುಗಳಿಗೂ ಪ್ರಾತಿನಿಧ್ಯ ನೀಡಿ ಉತ್ಸಾಹಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು, ಅಂತಿಮ ನಿರ್ದೇಶಕರ ಪಟ್ಟಿ ಕುಶಾಲನಗರದಲ್ಲಿ ಪೂರ್ಣಗೊಳಿಸಲಾಗುವದು. ಕೊಡಗು ಜಿಲ್ಲಾ ಬಲಿಜ ವಿದ್ಯಾಭಿವೃದ್ಧಿ ಸಂಘ ಹಾಗೂ ಕ್ಷೇಮನಿಧಿ ಸ್ಥಾಪಿಸುವ ಸದುದ್ದೇಶವೂ ಇದ್ದು ಜಿಲ್ಲೆಯ ಬಲಿಜ ಜನಾಂಗ ಪೂರಕ ಬೆಂಬಲ ನೀಡುವ ಅವಶ್ಯಕತೆ ಇದೆ ಎಂದು ಇದೇ ಸಂದರ್ಭ ಮನವಿ ಮಾಡಿದರು.

ಬೆಂಗಳೂರಿನಲ್ಲಿ ನಿಧನ ಹೊಂದಿದ ಕೊಡಗಿನ ಯುವಕ ಎಸ್.ಕೆ.ಕುಮಾರ್(40), ಸಿದ್ದಾಪುರದಲ್ಲಿ ನಿಧನರಾದ ಹನುಮಯ್ಯ(80), ತಿತಿಮತಿಯಲ್ಲಿ ನಿಧನರಾದ ಶೇಷು (65) ಮತ್ತು ಸುರೇಶ್(35) ಅವರ ಆತ್ಕಕ್ಕೆ ಶಾಂತಿ ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ಆರ್.ಗಣೇಶ್, ಖಜಾಂಚಿ ಟಿ.ಜಿ. ಹರ್ಷ, ಹಿರಿಯರಾದ ಸುಶೀಲ್ ದೇವಯ್ಯ, ಸಹಕಾರ್ಯದರ್ಶಿಗಳಾದ ಸಿದ್ದಾಪುರ ವಿಮಲ, ಪೆರುಂಬಾಡಿ ಟಿ.ಡಿ. ಸುಮಲತಾ, ನಿರ್ದೇಶಕರಾದ ಟಿ.ಎಸ್.ರಮೇಶ್ ( ವೀರಾಜಪೇಟೆ), ಪಾಲಿಬೆಟ್ಟದ ಭಾಗ್ಯವತಿ ಚೆಲುವಯ್ಯ, ಪೆÇನ್ನಂಪೇಟೆ ಆಶಾ ಶ್ರೀನಿವಾಸ್ ನಾಯ್ಡು, ಯೋಗೀಶ್, ಟಿ.ಎಸ್. ರಾಮಯ್ಯ, ಟಿ.ಕೆ.ದಿನೇಶ್, ಟಿ.ಎಸ್. ಸಂಪತ್‍ಕುಮಾರ್ ಹಾಗೂ ಗೀತಾ ಜಿ.ನಾಯ್ಡು ಉಪಸ್ಥಿತರಿದ್ದರು.