ಸೋಮವಾರಪೇಟೆ, ಫೆ. 17: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಲಭಿಸಿರುವದು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಬಲವರ್ಧನೆಗೆ ಸಹಾಯಕವಾಗಲಿದೆ ಎಂದು ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‍ಗೆ ಎಪಿಎಂಸಿಯ ಅಧಿಕಾರದಿಂದ ಹೆಚ್ಚಿನ ಬಲಬಂದಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರ ಕಾರ್ಯ ಶ್ಲಾಘನೀಯ ಎಂದರು. ದಲಿತ ವ್ಯಕ್ತಿಗೆ ಅಧಿಕಾರ ನೀಡಿರುವದು ಕಾಂಗ್ರೆಸ್‍ನ ಹೆಗ್ಗಳಿಕೆಯಾಗಿದ್ದು, ಇದನ್ನು ಸಹಿಸದ ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ.
ಎಪಿಎಂಸಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಮೇಶ್ ಅವರು ಎಲ್ಲಾ ಪಕ್ಷದವರಲ್ಲೂ ಪಕ್ಷಾತೀತವಾಗಿ ಮತ ಯಾಚಿಸಿದ್ದರು. ರಮೇಶ್ ಅವರ ವ್ಯಕ್ತಿತ್ವಕ್ಕೆ ಹೆಚ್ಚಿನ ಮತಗಳು ಲಭಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ಪಕ್ಷದವರು, ದಲಿತರ ಪರವಾಗಿ ದ್ದಾರೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ ಎಂದು ಕುಟುಕಿದರು.
ಗೋಷ್ಠಿಯಲ್ಲಿ ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಕಾರ್ಮಿಕ ಘಟಕದ ಅಧ್ಯಕ್ಷ ವಹಾಬ್, ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಟಿಪ್ಪು ಸುಲ್ತಾನ್ ಯುವಕ ಸಂಘದ ಕಾರ್ಯದರ್ಶಿ ಸಾಹೀಲ್ ಪಾಷ ಅವರುಗಳು ಉಪಸ್ಥಿತರಿದ್ದರು.