ಸೋಮವಾರಪೇಟೆ, ಫೆ. 17: ತೋಟಗಾರಿಕೆ ಇಲಾಖೆ ವತಿಯಿಂದ ಗೌಡಳ್ಳಿ ಗ್ರಾಮದ ಪ್ರಗತಿಪರ ಕೃಷಿಕರಾದ ಲತಾ ಅವರ ತೋಟದಲ್ಲಿ ಕಾಳುಮೆಣಸು ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ತೋಟಗಾರಿಕಾ ಬೆಳೆಗಳ ವಿಷಯ ತಜ್ಞ ನಾಚಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೃಷಿಕರೇ ಸಂಬಾರ ಬೆಳೆಗಳ ವಿಜ್ಞಾನಿಗಳು. ರೈತರು ಮತ್ತು ವಿಜ್ಞಾನಿಗಳು ತೋಟಗಾರಿಕಾ ಬೆಳೆಗಳ ಬಗೆಗಿನ ಸೂಕ್ತ ಮಾಹಿತಿಯನ್ನು ವಿನಿಮಯ ಮಾಡಿಕೊಂಡರೆ ಗುಣಮಟ್ಟದ ಇಳುವರಿಯನ್ನು ಪಡೆದು ಯಶ ಕಾಣಬಹುದು ಎಂದು ಅಭಿಪ್ರಾಯಿಸಿದರು.

ಕಾಫಿ, ಕಾಳುಮೆಣಸು ಬೆಳೆಯ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಧಾರ ಮಾಡುವದರಿಂದ, ಕೃಷಿಕರು ಫಸಲಿನ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಕೊಡಗು ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಪ್ರದೇಶವಾಗಿದ್ದು, ಪರಾಗಸ್ಪರ್ಶಕ್ಕೆ ಅವಶ್ಯಕವಿರುವ ಜೇನ್ನೊಣಗಳ ಸಂತತಿಯೂ ಇದೆ. ಪ್ರಕೃತಿಯ ಕೊಡುಗೆಯನ್ನು ಸದುಪಯೋಗಪಡಿಸಿಕೊಂಡು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ತೋಟಗಾರಿಕಾ ಬೆಳೆಗಳ ಪ್ರದೇಶ ಮತ್ತು ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿ ಭಾರತವಿದೆ. ಕರ್ನಾಟಕ 6ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯಲು ಕೃಷಿಕರು ತಮ್ಮ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ಹೆಚ್.ಹೆಚ್. ಧರ್ಮಾಚಾರಿ, ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ, ಗ್ರಾ.ಪಂ. ಸದಸ್ಯ ಹೇಮಂತ್, ತೋಟಗಾರಿಕಾ ಅಧಿಕಾರಿ ಗಣೇಶ್, ಪ್ರಗತಿಪರ ಕೃಷಿಕರಾದ ಲತಾ ಉಪಸ್ಥಿತರಿದ್ದರು.