ಮಡಿಕೇರಿ, ಫೆ. 17: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಪ್ರತಿ ಗ್ರಾಮಕ್ಕೆ ಒಂದು ಸರ್ಕಾರ ಎನ್ನುವ ಪರಿಕಲ್ಪನೆಯೊಂದಿಗೆ ಜಾರಿಗೆ ತಂದಿರುವಪಂಚಾಯತ್ ರಾಜ್ ವ್ಯವಸ್ಥೆಯಿಂದ ಇಂದು ದೇಶ ಆರ್ಥಿಕವಾಗಿ ಮತ್ತು ಸಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಅಭಿಪ್ರಾಯಪಟ್ಟಿದ್ದಾರೆ.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಸಂಪಾಜೆಯಲ್ಲಿ ನಡೆದ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದ ಅವರು ಗ್ರಾಮಗಳ ಅಭ್ಯುದಯದಿಂದ ದೇಶದ ಅಭಿವೃದ್ಧಿ ಸಾಧ್ಯವೆಂದರು. ದೂರ ದೃಷ್ಟಿತ್ವ ಹೊಂದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಅಧಿಕಾರ ವಿಕೇಂದ್ರೀಕರಣದ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ದೇಶದ ಆಡಳಿತ ವ್ಯವಸ್ಥೆಯನ್ನು ಬಲಗೊಳಿಸಿದರು. ಕೆಲವೇ ನೂರರಷ್ಟಿರುವ ಸಂಸದರು ಹಾಗೂ ಸಾವಿರದಷ್ಟಿರುವ ಶಾಸಕರು ದೇಶದ ನೂರು ಕೋಟಿ ಜನರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಮನಗಂಡ ಅವರು ಪ್ರತಿ ಗ್ರಾಮಕ್ಕೆ ಒಂದು ಸರ್ಕಾರ ಎನ್ನುವ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಈ ಕಾರಣದಿಂದಲೇ ದೇಶ ಇಂದು ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸುಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ರಾಜ್ಯ ಕಾಂಗ್ರೆಸ್ ಸರಕಾರದ ಜನಪರ ಕಾಳಜಿಯನ್ನು ಕಾರ್ಯಕರ್ತರು ಜನರಿಗೆ ತಿಳಿ ಹೇಳಬೇಕೆಂದರು. ಯುವ ನಾಯಕ ರಾಹುಲ್ ಗಾಂಧಿ ಅವರು ಗ್ರಾಮೀಣ ಭಾಗದಲ್ಲಿ ಪಕ್ಷದ ಬಲವರ್ಧನೆಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಕಾರ್ಯಕರ್ತರು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದು ಕರೆ ನೀಡಿದರು. ಪಕ್ಷ ಮತ್ತು ಜನ ಸಾಮಾನ್ಯರ ನಡುವೆ ಬಾಂಧವ್ಯ ವೃದ್ಧಿಯಾಗಲು ರಾಜೀವ್ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮೂಲಕ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ಕೊಲ್ಯದ ಗಿರೀಶ್ ಸಲಹೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಸಂಘಟನೆಯ ಜಿ.ಪಂ. ಕ್ಷೇತ್ರದ ಸಂಯೋಜಕ ಪಿ.ಎಲ್. ಸುರೇಶ್, ಜಿ.ಪಂ. ಮಾಜಿ ಸದಸ್ಯ ಮೊಯ್ದಿನ್ ಕುಜ್ಞ, ಗ್ರಾ.ಪಂ. ಸದಸ್ಯೆ ರಾಜೇಶ್ವರಿ, ಮಾಜಿ ಮಂಡಲ ಪಂಚಾಯಿತಿ ಸದಸ್ಯ ಸಿ.ಕೆ. ರತ್ನಾಕರ್, ಯುವ ಮುಖಂಡ ಹೆಚ್.ಬಿ. ಸುಂದರ, ಡಿ.ಡಿ. ಲೀಲಾವತಿ, ಪ್ರಶಾಂತ್, ಬಿ.ಎನ್. ತಿಮ್ಮಪ್ಪ, ಹೆಚ್.ಎಂ. ಮಾಯಿ, ಚೋಮ ಸಂಪಾಜೆ, ಕೆ.ಜೆ. ಜಗದೀಶ್, ಗುಡ್ಡಗದ್ದೆ ವೇದಾವತಿ, ಜಯಕುಮಾರ್, ಮಹಮ್ಮದ್ ಹನೀಫ್ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.