ಸೋಮವಾರಪೇಟೆ, ಫೆ. 17: ಸಮೀಪದ ಗೌಡಳ್ಳಿ ಫ್ರೆಂಡ್ಸ್ ಪುಟ್ಬಾಲ್ ಕ್ಲಬ್ ವತಿಯಿಂದ ಮಲ್ಲೇಶ್ವರ ಪ್ರೌಢಶಾಲಾ ಮೈದಾನದಲ್ಲಿ ತಾ. 22 ಮತ್ತು 23 ರಂದು 2ನೇ ವರ್ಷದ ಮುಕ್ತ ಪುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಗುರುಪ್ರಸಾದ್ ತಿಳಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡಳ್ಳಿಯ ನವದುರ್ಗಾ ಪರಮೇಶ್ವರಿ ದೇವಾಲಯ ಜಾತ್ರಾ ಮಹೋತ್ಸವದ ಅಂಗವಾಗಿ ಮಲ್ಲೇಶ್ವರ ಪ್ರೌಢಶಾಲೆ ಆಟದ ಮೈದಾನದಲ್ಲಿ ಪಂದ್ಯಾವಳಿ ಯನ್ನು ಆಯೋಜಿಸಲಾಗಿದೆ.
ಪ್ರಥಮ ಬಹುಮಾನ 20ಸಾವಿರ ನಗದು ಮತ್ತು ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನ 10 ಸಾವಿರ ನಗದು ಹಾಗೂ ಆಕರ್ಷಕ ಪಾರಿತೋಷಕ ಸೇರಿದಂತೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಬಹುಮಾನಗಳನ್ನು ನೀಡಲಾಗುವದು ಎಂದರು.
ಪಂದ್ಯಾಟದಲ್ಲಿ ಭಾಗವಹಿಸು ವವರು ತಾ. 21 ರೊಳಗೆ ತಂಡದ ಹೆಸರನ್ನು ನೋಂದಾಯಿಸಿ ಕೊಳ್ಳಬೇಕೆಂದು ಮನವಿ ಮಾಡಿದ ಅವರು, ಆಟಗಾರರು ಕಡ್ಡಾಯವಾಗಿ ಸಮವಸ್ತ್ರ ಮತ್ತು ಶೂಗಳನ್ನು ಹೊಂದಿರಬೇಕು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ: 9481815446 ಅಥವಾ 9480748084 ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಸಂದೀಪ್, ಗೌಡಳ್ಳಿ ಸುನೀಲ್, ಬೀಟಿಕಟ್ಟೆ ವೇಣುಗೋಪಾಲ್, ದರ್ಶನ್, ಚನ್ನಾಪುರ ಪ್ರದೀಪ್ ಗಾಂಧಿ, ಹಿರಿಕರ ಪಾಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.