ಕುಶಾಲನಗರ, ಫೆ. 17: ಸರ್. ಸಿ.ವಿ. ರಾಮನ್ ಜನ್ಮ ಶತಮಾನೋತ್ಸವ ಪ್ರಶಸ್ತಿಗೆ ಭಾಜನರಾದ ಮಂಗಳೂರು ವಿವಿ ಉಪ ಕುಲಪತಿ ಪ್ರೊ. ಕೆ. ಭೈರಪ್ಪ ಅವರನ್ನು ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಭೈರಪ್ಪ ಅವರನ್ನು ಬೆಂಗಳೂರಿನ ಹಿರಿಯ ವಿಜ್ಞಾನಿ ಪ್ರೊ. ಕಟ್ಟೇರ ಅಪ್ಪಣ್ಣ ಸುರೇಶ್ ಅವರು ಸನ್ಮಾನಿಸಿ ಗೌರವಿಸಿದರು.
ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ ಅಪ್ಪಣ್ಣ ಸುರೇಶ್, ಭೈರಪ್ಪ ಅವರ ಅಧಿಕಾರ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಉತ್ತಮ ಅಭಿವೃದ್ಧಿ ಕಂಡಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿವಿಯ ಸಿಂಡಿಕೇಟ್ ಸದಸ್ಯರಾದ ಪುಷ್ಪ ಕುಟ್ಟಣ್ಣ ಮಾತನಾಡಿದರು. ಸ್ನಾತಕೋತ್ತರ ಕೇಂದ್ರದ ಪ್ರಬಾರ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಎಂ. ಜಯಶಂಕರ್ ಸೈಟೇಷನ್ ರೀಡಿಂಗ್ ವಾಚಿಸಿದರು. ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಪ್ರಮುಖರು, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕಾಲೇಜಿನ ವಿವಿಧ ವಿಭಾಗಗಳ ವತಿಯಿಂದ ಪ್ರಶಸ್ತಿ ವಿಜೇತ ಪ್ರೊ. ಕೆ. ಭೈರಪ್ಪ ಅವರನ್ನು ಅಭಿನಂದಿಸಿದರು.
ಡಾ. ಕೆ.ಎಸ್. ಚಂದ್ರಶೇಖರಯ್ಯ ಪ್ರಾಸ್ತಾವಿಕ ನುಡಿಯಾಡಿ, ಸ್ವಾಗತಿಸಿದರು. ಸಂಧ್ಯಾ ಹಾಗೂ ಅಖಿಲ ಪ್ರಾರ್ಥಿಸಿ, ಪ್ರಾಧ್ಯಾಪಕ ಜಮೀರ್ ಅಹಮ್ಮದ್ ನಿರೂಪಿಸಿ, ಪ್ರೊ. ಮಂಜುಳಾ ಶಾಂತರಾಮ್ ವಂದಿಸಿದರು.