ಮಡಿಕೇರಿ, ಫೆ. 17: ಅಭಿವೃದ್ಧಿ ಕಾರ್ಯಗಳಿಗೆಂದು ಸರಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಆ ಹಣವನ್ನು ಪೋಲು ಮಾಡುವದೆಂದರೆ ಅಧಿಕಾರಿಗಳಿಗೆ, ಪ್ರತಿನಿಧಿಗಳಿಗೆ ಎಲ್ಲಿಲ್ಲದ ಸಂತೋಷ ಕಾಣ್ಸುತ್ತೆ.

ಇದು ಯಾಕೇಂದ್ರೆ ಬೆಳೆಯುತ್ತಿರುವ ಮಡಿಕೇರಿಯಲ್ಲಿ ಖಾಸಗಿ ಬಸ್ ನಿಲ್ದಾಣ ಆಗಬೇಕೆಂಬ ಅಪೇಕ್ಷೆ ಎಲ್ಲರದ್ದು. ಗ್ರಹಣ, ಗ್ರಹಚಾರಗಳೆಲ್ಲ ಕಳೆದು ಇದೀಗ ಬಸ್ ನಿಲ್ದಾಣ ಕಾಮಗಾರಿಗೆ ಜೀವ ಬಂದಂತಾಗಿದೆ. ಬಸ್ ನಿಲ್ದಾಣಕ್ಕೆ ಕೃಷಿ ವಿ.ವಿ.ಗೆ ಸೇರಿದ ಜಾಗ ಗುರುತಿಸಲಾಗಿದೆ. ಈ ಹಿಂದೆ ಎರಡು ಬಾರಿ ಕಾಮಗಾರಿಗೆ ಭೂಮಿ ಪೂಜೆಯೂ ನಡೆದಿದೆ. ಕೃಷಿ ವಿ.ವಿ.ಗೆ ಸೇರಿದ ಜಾಗ ಕೃಷಿ ಭೂಮಿಯಾಗಿದ್ದು, ನೀರಿನಿಂದಾವೃತವಾಗಿದ್ದುದರಿಂದ ಸಮತಟ್ಟು ಮಾಡಲೆಂದು ಎಲ್ಲಿಂದಲೋ ಮಣ್ಣನ್ನು ತಂದು ಸುರಿಯಲಾಯಿತು. ಆದರೆ, ಅವಶ್ಯಕತೆಗನುಗುಣವಾಗಿ ಮಣ್ಣನ್ನು ಸುರಿಯದೆ ರಾಶಿ ರಾಶಿ ಮಣ್ಣು ಹಾಕಲಾಗಿದ್ದು, ದೊಡ್ಡ ಬೆಟ್ಟದಂತಾಗಿತ್ತು. ಇದೀಗ ಅದೇ ಮಣ್ಣನ್ನು ಅಲ್ಲಿಂದ ತೆಗೆದು ಬೇರೆಡೆಗೆ ಸಾಗಿಸಲಾಗುತ್ತಿದೆ. ಅಷ್ಟೊಂದು ಮಣ್ಣಿನ ಅವಶ್ಯಕತೆಯಿಲ್ಲವೆಂದು ಮಣ್ಣು ಸುರಿಯುವಾಗಲೇ ಕೆಲವರು ಅಭಿಪ್ರಾಯಿಸಿದ್ದರಾದರೂ ತಂದು ರಾಶಿ ಹಾಕಲಾಗಿದ್ದು, ಇದೀಗ ಅದೇ ಮಣ್ಣನ್ನು ಬೇರೆಡೆಕೆ ಸಾಗಿಸಲಾಗುತ್ತಿದೆ. ಅನವಶ್ಯಕವಾಗಿ ಎರಡೆರಡು ಬಾರಿ ಜೆಸಿಬಿ, ಲಾರಿಗಳಿಗೆ ಹಣ ವ್ಯಯಿಸಲಾಗುತ್ತಿದೆ.

ಅದೂ ಅಲ್ಲದೆ, ಮಣ್ಣನ್ನು ಕೊಂಡೊಯ್ದು ಐಟಿಐ ಜಂಕ್ಷನ್ ಬಳಿಯಿರುವ ಖಾಸಗಿ ಗದ್ದೆಯಲ್ಲಿ ಸುರಿಯಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ನಗರದಲ್ಲಿ ಜಲಮೂಲಗಳು ಇರುವ ಕಡೆ, ಕೃಷಿಭೂಮಿಗಳನ್ನು ಕಟ್ಟಡ ಅಥವಾ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಬಿಡಬಾರದೆಂದು ಪ್ರತಿ ಸಭೆಗಳಲ್ಲಿ ಬೊಬ್ಬಿಡುತ್ತಾ ನಿರ್ಣಯ ಕೈಗೊಳ್ಳುವ ನಗರಸಭೆಯೇ ಇಂದು ಮಾಡುತ್ತಿರುವದಾದರೂ ಏನು ಎಂಬದು ಪ್ರಶ್ನೆ?

ಸದಸ್ಯರುಗಳಾದ ಕೆ.ಎಸ್. ರಮೇಶ್, ಪೀಟರ್, ಇದೀಗ ಮೂಡಾ ಅಧ್ಯಕ್ಷರೂ ಆಗಿರುವ ಹಿರಿಯ ಸದಸ್ಯ ಚುಮ್ಮಿ ದೇವಯ್ಯ ಅವರುಗಳು ಪ್ರತಿ ಸಭೆಯಲ್ಲೂ ಇದೇ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ಇದೀಗ ನಗರಸಭೆಯೇ ನೀರಿಗೆ ಮಣ್ಣು ಹಾಕುತ್ತಿದೆ. ಕನ್ನಂಡಬಾಣೆಯಿಂದ ಹಿಡಿದು, ಕಾವೇರಿ ಬಡಾವಣೆ, ಅದರ ಹಿಂದೆ ಕೆರೆ ಇದ್ದ ಪ್ರದೇಶ, ಆರ್ಮಿ ಕ್ಯಾಂಟೀನ್ ಕೆಳಭಾಗ, ಫೀ.ಮಾ. ಕಾರ್ಯಪ್ಪ ಕಾಲೇಜು ಹಿಂಭಾಗ ಸೇರಿದಂತೆ ಎಲ್ಲೆಡೆ ಜಲಾನಯನ ಪ್ರದೇಶಗಳು ಬಡಾವಣೆಗಳಾಗಿ ಮಾರ್ಪಾಡಾಗಿವೆ. ‘ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರಾದರೂ ಏನು ಮಾಡಲಿಕ್ಕಾಗುತ್ತೆ' ಅಲ್ಲವೇ...? -ಸಂತೋಷ್.