ಶ್ರೀಮಂಗಲ, ಫೆ. 17: ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಸಂಘಟನೆಯ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ರೈತಪರ ಹಾಗೂ ಜನಪರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಇವುಗಳ ಪರಿಹಾರಕ್ಕೆ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಚೆಸ್ಕಾಂ ಸಂಸ್ಥೆ ಲಾಭದಿಂದ ನಡೆಯುತ್ತಿದ್ದರೂ ಕೈಗಾರಿಕಾ ಉದ್ಯಮ ಕಂಪೆನಿಗಳಿಂದ ಮೂರು ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಇದನ್ನು ವಸೂಲಾತಿ ಮಾಡುವ ಬದಲು ರಾಜ್ಯದ-ಜಿಲ್ಲೆಯ ಜನರ ಮೇಲೆ 1.40 ರೂ. ದರ ಹೆಚ್ಚಳ ಮಾಡುವದನ್ನು ಪ್ರಶ್ನಿಸಿ ಈಗಾಗಲೇ ಸಂಘದ ವತಿಯಿಂದ 25 ಜನರು ಆಕ್ಷೇಪಣಾ ಪತ್ರವನ್ನು ಸಲ್ಲಿಸಲಾಗಿದೆ. ಕಳೆದ ಸಾಲಿನಲ್ಲಿ ಬೆಳೆ ಹೆಚ್ಚಳಕ್ಕೆ ನಿರ್ಧರಿಸಿದ ಚೆಸ್ಕಾಂ ಸಂಸ್ಥೆಯ ವಿರುದ್ಧ ಭಾರತೀಯ ಕಿಸಾನ್ ಸಂಘ ಆಕ್ಷೇಪಣಾ ಪತ್ರ ಸಲ್ಲಿಸಿದ ಪರಿಣಾಮ ದರ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಲವೂ ದರ ಪರಿಷ್ಕರಣೆಯ ವಿರುದ್ಧ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿ ಹಾಗೂ ಮಾನವ ಸಂಘರ್ಷ ಮಿತಿ ಮೀರಿದ್ದು, ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ ವಿಫಲವಾಗಿದೆ. ಇದಕ್ಕೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಹಿಡಿಯಲು ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯದಲ್ಲಿ ಕೇರಳ ರಾಜ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಳು ಮೆಣಸು ಬೆಳೆಸುತ್ತಿದ್ದರೂ ಕಾಳುಮೆಣಸು ಬೆಳೆಸುತ್ತಿರುವ ಕೊಡಗು, ಚಿಕ್ಕಮಗಳೂರು, ಹಾಸನ, ದ.ಕನ್ನಡ ಇತ್ಯಾದಿ ಜಿಲ್ಲೆಯ ಬೆಳೆಗಾರರಿಗೆ ಯಾವದೇ ಸೌಲಭ್ಯ ಸಿಗುತ್ತಿಲ್ಲ. ರಾಜ್ಯದ ಕಾಳುಮೆಣಸು ಕೇರಳದ ಬಂದರು ಮೂಲಕ ರಫ್ತ್ತಾಗುತ್ತಿರುವದರಿಂದ ಕೇರಳ ರಾಜ್ಯವೇ ಇವೆಲ್ಲವನ್ನು ಉತ್ಪಾದಿಸುತ್ತಿದೆ ಎಂದು ತಪ್ಪು ವರದಿಯಿಂದ ತೋಟಗಾರಿಕೆ ಇಲಾಖೆ ಹಾಗೂ ಸಾಂಬಾರು ಮಂಡಳಿಗಳಿಂದ ವಿಶೇಷ ಸಹಾಯಧನ ಹಾಗೂ ಪ್ಯಾಕೇಜ್ ಪಡೆಯುವಲ್ಲಿ ರಾಜ್ಯದ ಬೆಳೆಗಾರರು ವಂಚಿತರಾಗಿದ್ದಾರೆ. ಕರ್ನಾಟಕ ರಾಜ್ಯವು 2014-15ರಲ್ಲಿ ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಉತ್ಪಾದನೆ ಮಾಡಿದೆ. ಆ ಸಾಲಿನಲ್ಲಿ 70 ಸಾವಿರ ಟನ್ ಉತ್ಪಾದನೆ ಆಗಿದ್ದರೆ ರಾಜ್ಯ ಪಾಲು 33 ಸಾವಿರ ಟನ್. ಆದರೆ ಕೇರಳ ರಾಜ್ಯವು 28 ಸಾವಿರ ಟನ್ ಮಾತ್ರ ಉತ್ಪಾದನೆ ಮಾಡಿತ್ತು. ಈ ಅಂಕಿ ಅಂಶದ ಪ್ರಕಾರ ಕರ್ನಾಟಕ ರಾಜ್ಯವೇ ಕಾಳು ಮೆಣಸನ್ನು ಹೆಚ್ಚಾಗಿ ಉತ್ಪಾದಿಸುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ದೊರೆಯಬೇಕಾದ ಸೌಲಭ್ಯ ನಮ್ಮ ರೈತರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಕಿಸಾನ್ ಸಂಘದಿಂದ ಕೇಂದ್ರ ಸರಕಾರಕ್ಕೆ ನಿಯೋಗ ತೆರಳಿ ಮನವಿ ಸಲ್ಲಿಸಲು ನಿರ್ಧಾರ.
ಜಿಲ್ಲೆಯ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ರೈತರು ಹಾಗೂ ಬೆಳೆಗಾರರ ಅರ್ಜಿಗಳು ಸರಿಯಾಗಿ ವಿಲೇವಾರಿ ಯಾಗುತ್ತಿಲ್ಲ. ಪ್ರತಿಯೊಂದಕ್ಕೂ ಸತಾಯಿಸಿ ಹಣಕ್ಕೆ ಬೇಡಿಕೆಯನ್ನು ಕಂದಾಯ ಇಲಾಖೆಯಲ್ಲಿ ಇಡುತ್ತಿದ್ದಾರೆ. ಇದರಿಂದ ರೈತರು ಹಾಗೂ ಬೆಳೆಗಾರರಿಗೆ ಮಾನಸಿಕವಾಗಿ ಕಿರುಕುಳವಾಗುತ್ತಿದ್ದು, ಇದರ ವಿರುದ್ದ ಪ್ರಬಲವಾಗಿ ಹೋರಾಟ ನಡೆಸಿ ಶೀಘ್ರದಲ್ಲಿ ಕಡತ ವಿಲೇವಾರಿಯಾಗಿ ಕೆಲಸ ಮಾಡುವಂತೆ ಮಾಡುವದು.
ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಸ್ಥಳೀಯ ರೈತರ ಪ್ರಬಲ ವಿರೋಧದ ನಡೆವೆಯೂ ಬಲವಂತವಾಗಿ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆ ರೂಪಿಸ ಲಾಯಿತು. ಈ ಸಂದÀರ್ಭ ಜಿಲ್ಲೆಯ ರೈತರಿಗೆ ಈ ಮಾರ್ಗದಿಂದ ಪ್ರತಿನಿತ್ಯ 24 ಗಂಟೆ ವಿದ್ಯುತ್ ನೀಡುವ ಭರವಸೆ ನೀಡಲಾಯಿತು. ಆದರೆ ಯೋಜನೆ ರೂಪಿತವಾದ ಮೇಲೆ ಈ ಯೋಜನೆಯಿಂದ ಯಾವ ನಯಾಕಾಸಿನ ಪ್ರಯೋಜನವೂ ಜಿಲ್ಲೆಯ ಜನರಿಗೆ ಆಗಿಲ್ಲ. ಇದೇ ರೀತಿಯಲ್ಲಿ ದ.ಕೊಡಗಿನ ಕೊಂಗಣ ನದಿ ತಿರುವು ಯೋಜನೆ ಮೂಲಕ ಸ್ಥಳೀಯರಿಗೆ ಅನುಕೂಲ ಕಲ್ಪಿಸಿದ ನಂತರವೇ ಉಳಿದ ನೀರನ್ನು ಹುಣಸೂರು ಭಾಗಕ್ಕೆ ಹರಿಸಲಾಗು ವದು ಎಂದು ಜನರ ಹಾದಿ ತಪ್ಪಿಸಿ ಈ ಯೋಜನೆ ರೂಪಿಸಲು ಮುಂದಾದಲ್ಲಿ ಇದರ ಸಾಧಕ-ಭಾದಕ ಅದ್ಯಯನ ಮಾಡಿ ರೈತಪರ ಹೋರಾಟ ನಡೆಸಲು ನಿರ್ಧಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನೆಯ ಖಜಾಂಚಿ ಪುಟ್ಟಸ್ವಾಮಿ ಗೌಡ, ಜಿಲ್ಲಾ ಸಂಘ ಸಂಚಾಲಕ ಚಕ್ಕೇರ ಮನು, ಭಾರತೀಯ ಕಿಸಾನ್ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ, ಉಪಾಧ್ಯಕ್ಷರುಗಳಾಗಿ ಅಜಳ ರವಿ, ಕೆ.ಎಂ.ಹರೀಶ್, ಗೀತಾ ಬೆಳ್ಯಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಪಿ.ಎಸ್. ರತೀಶ್, ಸಹ ಕಾರ್ಯದರ್ಶಿಯಾಗಿ ಎಂ.ಜಿ ಮದನ್, ಕೆ.ಎಂ. ಸತೀಶ್, ಖಜಾಂಚಿಯಾಗಿ ಮನು ಮೇದಪ್ಪ, ಮಹಿಳಾ ಪ್ರಮುಖ ಕಾವೇರಮ್ಮ, ಯುವ ಪ್ರಮುಖ ವೈ.ಡಿ. ನಾಗೇಶ್, ಯುವಸಹ ಪ್ರಮುಖ ದೀಪಕ್ ಸೋಮಯ್ಯ, ಜಿಲ್ಲೆಯ ಮೂರು ತಾಲೂಕುಗಳಿಂದ ನಿರ್ದೇಶಕರುಗಳಾಗಿ ಬಾಬು, ಬಿ.ಜಿ. ಕುಟ್ಟಯ್ಯ, ಸಿ.ಪಿ. ಸತೀಶ್, ಗಣೇಶ್, ಮಿಲನ್, ಉದಯ, ನಾಗರಾಜ್, ರವೀಂದ್ರ, ಹೆಚ್.ಬಿ. ರಾಜಶೇಖರ್, ಪ್ರಭು ಪೂಣಚ್ಚ, ಪೊನ್ನಪ್ಪ, ಕಿಶನ್ ಮತ್ತಿತರರು ಹಾಜರಿದ್ದರು.