ಶನಿವಾರಸಂತೆ, ಫೆ. 17: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಶಾಲಪ್ಪ ತಮಗೆ ಸದಸ್ಯರಿಂದ ಒತ್ತಡವಿದೆ. ಆದ್ದರಿಂದ ನನ್ನನ್ನು ವರ್ಗಾವಣೆಗೊಳಿಸಿ ಎಂದು ಇ.ಓ. ಅವರಿಗೆ ಪತ್ರ ಬರೆದ ವಿಚಾರ ಪ್ರಸ್ತಾಪಿಸಿದ ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ, ನಿಮಗೆ ಪಂಚಾಯತ್ ರಾಜ್ ಕಾನೂನಿನ ಅರಿವಿದೆಯೇ? ಕಾನೂನನ್ನು ಪರಿಪಾಲಿಸುತ್ತಿದ್ದೀರಾ? ನಿಮಗೆ ಇಲ್ಲಿ ಕೆಲಸ ಮಾಡಲು ಆಗುವದಿಲ್ಲ. ನೀವು ಸಮರ್ಥರಲ್ಲ ಎಂದು ನಿಮಗೆ ಅನಿಸಿದರೆ ನೀವು ವರ್ಗಾವಣೆ ತೆಗೆದುಕೊಂಡು ಹೋಗಿ, ಅದು ಬಿಟ್ಟು ವಿನಾಕಾರಣ ಸದಸ್ಯರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಅಭಿವೃದ್ಧಿ ಅಧಿಕಾರಿ ಕುಶಾಲಪ್ಪ ಅವರು, ನಾನು ಈ ಪಂಚಾಯಿತಿ ಯಲ್ಲಿ ಕೆಲಸ ಮಾಡುವದಿಲ್ಲ ಎಂದು ಹೇಳಿಕೆ ನೀಡಿದರು. ಅವರ ಹೇಳಿಕೆ ಯನ್ನು ದಾಖಲು ಮಾಡಿಕೊಳ್ಳ ಲಾಯಿತು. ಚುನಾಯಿತ ಜನಪ್ರತಿನಿಧಿ ಗಳಿಗೆ ಈ ಅಧಿಕಾರಿ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಸ್ಪಂದಿಸುತ್ತಿಲ್ಲ. ಯಾವದೇ ಮಾಹಿತಿ ನೀಡುತ್ತಿಲ್ಲ ಸದಸ್ಯರು ಹೇಳಿದ ಜನಪರ ಕೆಲಸಗಳತ್ತ ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲವೆಂದಾದರೆ ಸಾಮಾನ್ಯ ಜನರ ಗತಿ ಏನು? ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಇದ್ದರೆ ಮಾತ್ರ ಸಾರ್ವಜನಿಕರ ಕೆಲಸ ಮಾಡಲು ಸಾಧ್ಯ ಎಂದು ಎಲ್ಲಾ ಸದಸ್ಯರುಗಳು ಒಕ್ಕೊರಲಾಗಿ ಹೇಳಿದರು.

ಅಧ್ಯಕ್ಷರು ಮೂಕಪ್ರೇಕ್ಷರಾಗಿ ರುತ್ತಾರೆ. ಅಧ್ಯಕ್ಷರು ಅವರ ಕಾರ್ಯ ವ್ಯಾಪ್ತಿಯಲ್ಲಿ ಅಧಿಕಾರ ಚಲಾಯಿಸಿ ದರೆ, ಎಲ್ಲವೂ ಸರಿಯಾಗುತ್ತದೆ ಎಂದು ಸದಸ್ಯರಾದ ಎಸ್.ಎನ್. ಪಾಂಡು ಹಾಗೂ ಎಸ್.ಎ. ಆದಿತ್ಯ ಹೇಳಿದರು. ಪತ್ರಿಕಾ ಭವನಕ್ಕೆ ಜಾಗದ ವಿಚಾರವಾಗಿ ಇಓ ಅವರು ಆದೇಶ ಕೊಟ್ಟರೆ ಮಾತ್ರ ಜಾಗ ಕೊಡುವದಾಗಿ ಅಭಿವೃದ್ಧಿ ಅಧಿಕಾರಿ ಹೇಳಿದಾಗ, ಕಾಫಿ ಬೆಳೆಗಾರರು ಹಾಗೂ ಇತರರು ಜಾಗ ಕೇಳಿರುವರು, ಅವರಿಗೂ ಜಾಗ ಕೊಡಬೇಕು, ಇಲ್ಲದಿದ್ದರೆ ಯಾರಿಗೂ ಜಾಗ ಕೊಡುವದು ಬೇಡ ಎಂದು ಸದಸ್ಯ ಆದಿತ್ಯ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ಉಷಾ, ರಜನಿ, ಹೇಮಾವತಿ, ಎಸ್.ಎ. ಆದಿತ್ಯ, ಸರ್ದಾರ್ ಅಹಮದ್, ಹೆಚ್. ಆರ್. ಹರೀಶ್, ಎಸ್.ಎನ್. ಪಾಂಡು, ಲೆಕ್ಕಾಧಿಕಾರಿ ಹರಿಣಿ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ, ಬಿಲ್‍ಕಲೆಕ್ಟರ್ ವಸಂತ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಶಾಲಪ್ಪ ಸ್ವಾಗತಿಸಿ, ವಂದಿಸಿದರು.