ಸೋಮವಾರಪೇಟೆ, ಫೆ. 17: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಲಭ್ಯವಿರುವ 108 ಆಂಬ್ಯುಲೆನ್ಸ್ ಸೇವೆಯ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಆಂಬ್ಯುಲೆನ್ಸ್‍ನ ಸಿಬ್ಬಂದಿಗಳು ಮಾಹಿತಿ ನೀಡಿದರು.

ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ಅರುಣ್‍ಕುಮಾರ್ ಮತ್ತು ಬೇಲೂರಯ್ಯ ಅವರುಗಳು 108 ಸೇವೆಗಳ ಬಗ್ಗೆ ಅರಿವು ಮೂಡಿಸಿದರು. ಇದರೊಂದಿಗೆ ದಡಾರ ಮತ್ತು ರುಬೆಲ್ಲಾ ರೋಗಗಳ ಲಸಿಕಾ ಅಭಿಯಾನದ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ತುರ್ತು ಚಿಕಿತ್ಸೆಯ ಸಂದರ್ಭ 108 ಆಂಬ್ಯುಲೆನ್ಸ್ ಸೇವೆಗೆ ಉಚಿತ ಕರೆ ಮಾಡಿದರೆ ಕೇಂದ್ರ ಸ್ಥಾನದಿಂದ ಸ್ಥಳೀಯ 108 ಕ್ಕೆ ಕರೆ ಮಾಡಿ ನೀವು ಇರುವ ಪ್ರದೇಶಕ್ಕೆ ವಾಹನವನ್ನು ಕಳುಹಿಸಿಕೊಡುವ ಸೇವೆ ಲಭ್ಯವಿದ್ದು, ತುರ್ತು ಸಂದರ್ಭಗಳಲ್ಲಿ ಇದನ್ನು ಉಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು. 108 ಕರೆ ಉಚಿತವಾಗಿ ರುವದರಿಂದ ಕೆಲವೊಮ್ಮೆ ಕಿಡಿಗೇಡಿಗಳು ತಪ್ಪು ಮಾಹಿತಿ ನೀಡಿ ಆಂಬ್ಯುಲೆನ್ಸ್‍ಗಳನ್ನು ವೃಥಾ ಅಲೆದಾಡಿಸುವ ಪ್ರವೃತ್ತಿಯೂ ನಡೆಯುತ್ತಿದ್ದು, ಇಂತಹ ಕಿಡಿಗೇಡಿಗಳ ಕೃತ್ಯ ಕಂಡುಬಂದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮವನ್ನೂ ಜರುಗಿಸುತ್ತದೆ ಎಂದು ಎಚ್ಚರಿಸಿದ ಸಿಬ್ಬಂದಿಗಳು, ಸರ್ಕಾರದ ಉಚಿತ ಸೇವೆಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.