ಮಡಿಕೇರಿ, ಫೆ. 17: ಕೊಡಗು ಜಿಲ್ಲೆಯಲ್ಲಿ 4507 ನಿವೃತ್ತ ಸೈನಿಕರು ಸೇರಿದಂತೆ ರಾಜ್ಯದಲ್ಲಿ ಒಟ್ಟು 77608 ಮಂದಿ ನಿವೃತ್ತ ಸೈನಿಕರು ಇದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.

ಜಿಲ್ಲಾವಾರು ಸೇರಿದಂತೆ ರಾಜ್ಯದಲ್ಲಿ ನಿವೃತ್ತಿ ಹೊಂದಿದ ಯೋಧರು ಹಾಗೂ ಅವರ ಅವಲಂಬಿತರಿಗೆ ಸರಕಾರ ಕಲ್ಪಿಸುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ನೀಡುವಂತೆ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.

ಕರ್ನಾಟಕ ಸರಕಾರ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. ಕರ್ನಾಟಕ ಸರಕಾರ ಯುದ್ಧದಲ್ಲಿ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಅವಲಂಬಿತರಿಗೆ ಹಾಗೂ ಗಾಯಗೊಂಡ ಸೈನಿಕರಿಗೆ ಈ ಕೆಳಗಿನ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ. ಎಕ್ಷಗ್ರೇಷಿಯ ರೂ. 5 ಲಕ್ಷಗಳ ಅನುದಾನವನ್ನು ಯುದ್ಧದಲ್ಲಿ ಮಡಿದ ಯೋಧರ ಮಡದಿಗೆ ಅಥವಾ ಅವಲಂಬಿತರಿಗೆ ಮತ್ತು ಪೂರ್ಣ ಗಾಯಗೊಂಡ ಯೋಧರಿಗೆ ನೀಡಲಾಗುವದು ಹಾಗೂ ರೂ. 1 ಲಕ್ಷಗಳ ಅನುದಾನವನ್ನು ಗಾಯಗೊಂಡ ಯೋಧರಿಗೆ ನೀಡಲಾಗುವದು.

ಯುದ್ಧದಲ್ಲಿ ಮಡಿದ ಯೋಧರ ಮಡದಿಗೆ ಅಥವಾ ಅವಲಂಬಿತರಿಗೆ 2 ಎಕರೆ ನೀರಾವರಿ ಜಮೀನು ಅಥವಾ 4 ಎಕರೆ ಮಳೆ ಆಧಾರಿತ ಜಮೀನು ಅಥವಾ 8 ಎಕರೆ ಒಣ ಜಮೀನು ನಗದು ಇಲ್ಲವೇ ಹಣ ರೂ. 1 ಲಕ್ಷ ನೀಡಲಾಗುವದು. ಯುದ್ಧ, ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ವೀರ ಯೋಧರ ಅವಲಂಬಿತರಿಗೆ ಸರಕಾರವು ಉಚಿತ ಮನೆ ಅಥವಾ ಮನೆ ಬದಲಿಗೆ ನಗದು ಅನುದಾನ ರೂ. 4.5 ಲಕ್ಷ (ಇತರೆ ರ್ಯಾಂಕ್‍ನವರಿಗೆ) ಮತ್ತು ರೂ. 6 ಲಕ್ಷಗಳವರೆಗೆ (ಅಧಿಕಾರಿಗಳು/ಜೆಸಿಒ)ಗಳಿಗೆ ನೀಡಲಾಗುವದು. ಯುದ್ಧ, ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ವೀರ ಯೋಧರ ಅವಲಂಬಿತರಿಗೆ, ಮಾಜಿ ಸೈನಿಕರಿಗಾಗಿ ಮೀಸಲಾತಿಯಡಿಯಲ್ಲಿ ಸರಕಾರಿ ನೌಕರಿ ನೀಡಲಾಗುವದು. ಪ್ರತಿಯೊಬ್ಬ ವೀರ ಯೋಧರ ಮತ್ತು ಗಾಯಗೊಂಡ ವೀರ ಯೋಧರ ಹೆಣ್ಣುಮಕ್ಕಳಿಗೆ ಮದುವೆ ಅನುದಾನ ರೂ. 20,000 ನೀಡಲಾಗುವದು. ಮಡಿದ ವೀರ ಯೋಧರ ಪತ್ನಿಯರಿಗೆ ಮನೆ ರಿಪೇರಿಗಾಗಿ ರೂ. 20 ಸಾವಿರಗಳ ಅನುದಾನ ನೀಡಲಾಗುವದು. (15 ವರ್ಷಕ್ಕೊಮ್ಮೆ). ಮಡಿದ ವೀರಯೋಧರ ಪತ್ನಿಯರಿಗೆ ಅಥವಾ ಅವಲಂಬಿತರಿಗೆ ಮನೆ ಕಂದಾಯದಲ್ಲಿ ರಿಯಾಯಿತಿ ನೀಡಲಾಗುವದು. 1978ರ ಮುಂಚೆ ನಡೆದ ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೆ ಮತ್ತು ಎರಡನೆ ಮಹಾ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕರಿಗೆ ಪ್ರತಿ ತಿಂಗಳು ರೂ, 3 ಸಾವಿರ ಪರಿಹಾರಧನವಾಗಿ ನೀಡಲಾಗುವದು. ಯುದ್ಧದಲ್ಲಿ ಮಡಿದ ಮಾಜಿ ಸೈನಿಕರ ಅವಲಂಬಿತರಿಗೆ ಉಚಿತ ಬಸ್ ಪಾಸ್ ನೀಡಲಾಗುವದು.

ಪುಸ್ತಕ ಮತ್ತು ಶಿಷ್ಯ ವೇತನ

ಒಂದನೆ ತರಗತಿಯಿಂದ ಪದವಿಯವರೆಗೆ ಓದುವ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ ನೀಡಲಾಗುವದು. ಪಿಂಚಣಿ ಸಿಗದ ಮಾಜಿ ಸೈನಿಕರ ಮಕ್ಕಳಿಗೆ ಪುಸ್ತಕ ಅನುದಾನ ನೀಡಲಾಗುವದು. ಡೆಹರಾಡೂನ್ ರಾಷ್ಟ್ರೀಯ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿರುವ ಕರ್ನಾಟಕದ ಮಕ್ಕಳಿಗೆ ಶಿಷ್ಯ ವೇತನವಾಗಿ ರೂ. 10 ಸಾವಿರ ನೀಡಲಾಗುವದು. ರಾಷ್ಟ್ರೀಯ ಮಿಲಿಟರಿ ಅಕಾಡೆಮಿಯಲ್ಲಿ (ಎನ್‍ಡಿಎ) ಓದುತ್ತಿರುವ ಕರ್ನಾಟಕದ ಮಕ್ಕಳಿಗೆ ಶಿಷ್ಯ ವೇತನ ನೀಡಲಾಗುವದು.

ಆರ್ಥಿಕ ಧನ ಸಹಾಯ

ಮಾಜಿ ಸೈನಿಕರು ಅಥವಾ ವಿಧವೆಯರ ಒಬ್ಬ ಹೆಣ್ಣು ಮಕ್ಕಳ ಮದುವೆಗೆ ಮದುವೆ ಅನುದಾನ ರೂ. 5 ಸಾವಿರ ನೀಡಲಾಗುವದು. ಕನ್ನಡಕ, ಹಿಯರಿಂಗ್ ಉಪಕರಣ, ಆರ್‍ಟಿಪಿಷಿಯಲ್ ಡೆಂಟಲ್, ಕಾಂಟೇಕ್ಟ್ಟ್ ಲೆನ್ಸ ಖರೀದಿಸಲು ಮಾಜಿ ಸೈನಿಕರಿಗೆ ಮತ್ತು ಅವರ ಪತ್ನಿಯರಿಗೆ ರೂ. 600 ರಿಂದ 3 ಸಾವಿರದವರೆಗೆ ಸಹಾಯಧನ ನೀಡಲಾಗುವದು.

ಮಾಜಿ ಸೈನಿಕರ ಪತ್ನಿಯರಿಗೆ ರೂ. 4 ಸಾವಿರ ಮರಣೋತ್ತರ ಪರಿಹಾರಧನ ನೀಡಲಾಗುತ್ತದೆ. ಪಿಂಚಣಿ ಸಿಗದ ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ರೂ. 4 ಸಾವಿರ ವಾರ್ಷಿಕ ಪರಿಹಾರ ಧನ ನೀಡಲಾಗುವದು. ಎರಡನೇ ಮಹಾ ಯುದ್ಧದಲ್ಲಿ ಭಾಗವಹಿಸಿದ ಪಿಂಚಣಿಯಿಲ್ಲದೆ ಬಿಡುಗಡೆ ಹೊಂದಿದ ಮಾಜಿ ಸೈನಿಕರಿಗೆ ಮತ್ತು ಅವರ ವಿಧವಾ ಪತ್ನಿಗೆ ಪ್ರತಿ ತಿಂಗಳು ರೂ. 3 ಸಾವಿರ ಗೌರವಧನವಾಗಿ ನೀಡಲಾಗುವದು.

ಕಷ್ಟದಲ್ಲಿ ಇರುವ ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಸ್ಥಳೀಯ ಧನ ಸಹಾಯ ನೀಡಲಾಗುವದು. ಪಿಂಚಣಿ ಸಿಗದ ಮಾಜಿ ಸೈನಿಕರಿಗೆ ತೀವ್ರ ರೋಗ ಪೀಡಿತರಾಗಿದ್ದರೆ ಅವರ ಆಸ್ಪತ್ರೆ ಖರ್ಚಿಗಾಗಿ ಸ್ಥಳೀಯ ಧನ ಸಹಾಯವಾಗಿ ರೂ. 10 ಸಾವಿರ ನೀಡಲಾಗುವದು. ಪೂರ್ಣವಾಗಿ ಅಂಗವಿಕಲರಾಗಿರುವ 3 ಯೋಧರು ಪ್ಯಾರಪ್ಲೇಜಿಕ್ ಪುನರ್ವಸತಿ ಕೇಂದ್ರ ಕಿರಕಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಸೈನಿಕರಿಗೆ ಪ್ರತಿ ವರ್ಷ ರೂ. 80 ಸಾವಿರ ನೀಡಲಾಗುವದು.

ಯುದ್ಧ ಪ್ರಶಸ್ತಿ

ಮನೆಯ ಒಬ್ಬನೆ ಮಗ ಅಥವಾ ಮಗಳು ಇದ್ದು, ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ರೂ. 450 ಯುದ್ಧ ಪ್ರಶಸ್ತಿಯಾಗಿ ನೀಡಲಾಗುವದು. ಮನೆಯ ಇಬ್ಬರು ಮಕ್ಕಳು ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ರೂ. 600 ಯುದ್ಧ ಪ್ರಶಸ್ತಿಯಾಗಿ ನೀಡಲಾಗುವದು. ಮನೆಯ ಮೂರು ಮಕ್ಕಳು ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ರೂ. 750 ಯುದ್ಧ ಪ್ರಶಸ್ತಿಯಾಗಿ ನೀಡಲಾಗುವದು.

ಶೌರ್ಯ ಇತರೆ ಶೌರ್ಯ ಪ್ರಶಸ್ತಿ ವಿಜೇತರಿಗೆ ಧನ ಸಹಾಯ ನೀಡಲಾಗುತ್ತಿದೆ. ಶೇ. 10 ರಷ್ಟು ಸೈಟುಗಳನ್ನು ಮಾಜಿ ಸೈನಿಕರಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಮೀಸಲಾಗಿರುತ್ತದೆ. ಶೇ. 10 ಸೈಟುಗಳನ್ನು ಆಶ್ರಯ ಯೋಜನೆಯಡಿ ಮಾಜಿ ಸೈನಿಕರಿಗೆ ಮೀಸಲಾಗಿರುತ್ತದೆ.

ಕರ್ನಾಟಕದಲ್ಲಿ ನೆಲೆಸಿರುವ ಮಾಜಿ ಸೈನಿಕರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ

ಪಾಲಿಟೆಕ್ನಿಕ್ ಕೋರ್ಸ್‍ಗಳಲ್ಲಿ ಶೇ. 2.5 ಸೀಟುಗಳು. ಡಿಎಡ್ ಕೋರ್ಸ್‍ಗಳಲ್ಲಿ 20 ಸೀಟುಗಳು, ಬಿಎಡ್ ಕೋರ್ಸ್‍ಗಳಲ್ಲಿ 15 ಸೀಟುಗಳು, ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿ 136 ಸೀಟುಗಳು, ಎಂಬಿಬಿಎಸ್ ಕೋರ್ಸ್‍ಗಳಲ್ಲಿ 6 ಸೀಟುಗಳು, ಬಿಡಿಎಸ್ ಕೋರ್ಸ್‍ಗಳಲ್ಲಿ 2 ಸೀಟುಗಳು, ಕೃಷಿ ವಿದ್ಯಾಲಯದಲ್ಲಿ ಶೇ. 2.5 ಸೀಟುಗಳು, ಎಲ್ಲಾ ಸರಕಾರಿ ಹುದ್ದೆಗಳಲ್ಲಿ ಗ್ರೂಪ್ ಎ, ಬಿ, ಸಿ ಮತ್ತು ಡಿಗಳಲ್ಲಿ ಶೇ. 10 ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಾಗಿರುತ್ತದೆ.

ಮಾಜಿ ಸೈನಿಕರು ಮಿಲಿಟರಿ ಸೇವೆಯಲ್ಲಿ ಪಡೆಯುತ್ತಿದ್ದ ಮೂಲ ವೇತನದ ನಿಗದಿ ಸೌಲಭ್ಯ, ಗಣನೆಗೆ ತೆಗೆದುಕೊಂಡು ಅವರನ್ನು ಕರ್ನಾಟಕದ ಸಿವಿಲ್ ಸೇವೆಯ ಆದೇಶದ ಪ್ರಕಾರ ನೌಕರಿಯಲ್ಲಿ ಭರ್ತಿ ಮಾಡಲಾಗುವದು. ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಕಾರವಾರ, ಮಡಿಕೇರಿ, ಮೈಸೂರು, ಮಂಗಳೂರು, ಶಿವಮೊಗ್ಗಗಳಲ್ಲಿ ಕಡಿಮೆ ದರದಲ್ಲಿ ಸೈನಿಕ ವಿಶ್ರಾಂತಿ ಗೃಹಗಳ ಸೌಲಭ್ಯಗಳಿವೆ.

ಬೆಳಗಾವಿ, ಅಥಣಿ, ಕಾರವಾರ, ವಿಜಯಪುರ, ಮೈಸೂರುಗಳಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಉಚಿತ ಬಾಲಕರ ವಸತಿ ನಿಲಯಗಳ ಸೌಲಭ್ಯ. ಬಾಲಕಿಯರ ವಸತಿ ನಿಲಯಗಳ ಸೌಲಭ್ಯ ಧಾರವಾಡದಲ್ಲಿ ಇದೆ. ಕರ್ನಾಟಕದಲ್ಲಿ ಖಾಯಂ ಆಗಿ ನೆಲೆಸಿದ ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಮನೆ ಕಂದಾಯದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುವದು ಎಂದು ಗೃಹ ಸಚಿವರು ಉತ್ತರಿಸಿದ್ದಾರೆ.