ಮಡಿಕೇರಿ, ಫೆ. 17: ತುಳು ಭಾಷೆಯನ್ನು ಮಾತನಾಡುವ 13 ಸಮುದಾಯಗಳು ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವ ಮೂಲಕ ತುಳು ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ಆಸಕ್ತಿ ತೋರುತ್ತಿರುವದು ಶ್ಲಾಘನೀಯವೆಂದು ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ತಿಳಿಸಿದ್ದಾರೆ.ಜನಪದ ಕೂಟದ ಮಡಿಕೇರಿ ತಾಲೂಕಿನ ಗಾಳಿಬೀಡು ವಲಯ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುಳು ಭಾಷಿಕರು ಒಂದೇ ವೇದಿಕೆಯಲ್ಲಿ ಸಂಘಟಿತರಾಗುತ್ತಿರುವದು ಇತಿಹಾಸವೆಂದರು. ಜಿಲ್ಲೆಯ ತುಳು ಸಮುದಾಯದ ಹಿತ ಕಾಯುವ ಕೆಲಸವನ್ನು ತುಳುವೆರ ಜನಪದ ಕೂಟ ಮಾಡುತ್ತಿದೆ. ಶ್ರೀಮಂತವಾದ ತುಳು ಸಂಸ್ಕøತಿ, ಆಚಾರ-ವಿಚಾರವನ್ನು ಉಳಿಸಿ, ಬೆಳೆಸುವ ಅಗತ್ಯವಿದ್ದು, ಗ್ರಾಮ ಮಟ್ಟದಲ್ಲಿ ಸಂಘಟನೆ ಸದೃಢವಾಗಬೇಕೆಂದರು.
ಕೂಟದ ಜಿಲ್ಲಾ ಉಪಾಧ್ಯಕ್ಷ ನಾರಾಯಣ ರೈ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಮ ಸಮಿತಿಗಳನ್ನು ರಚಿಸಲಾಗುವದೆಂದರು. ಜಿಲ್ಲಾ ಗೌರವ ಸಲಹೆಗಾರ ಐತಪ್ಪ ರೈ ಮಾತನಾಡಿ, ಜಿಲ್ಲೆಯಲ್ಲಿರುವ ಪ್ರತಿ ತುಳು ಕುಟುಂಬ ಕೂಟದಲ್ಲಿ ಸದಸ್ಯತ್ವ ಪಡೆಯಬೇಕೆಂದರು. ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟನೆ ರಚನೆಯಾದ ನಂತರ ಬೃಹತ್ ತುಳು ಸಮ್ಮೇಳನ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬರ ಶ್ರಮ ಅಗತ್ಯವಿದ್ದು, ಸಂಘಟನೆಯೊಂದಿಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಮಡಿಕೇರಿ ತಾಲೂಕು ತುಳುವೆರ ಜನಪದ ಕೂಟದ ಅಧ್ಯಕ್ಷ ಪ್ರಭು ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಡಿಕೇರಿ ತಾಲೂಕು ಭಂಟರ ಸಂಘದ ಅಧ್ಯಕ್ಷ ರಮೇಶ್ ರೈ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಆಚಾರ್ಯ, ತುಳುವೆರ ಜನಪದ ಕೂಟದ ತಾಲೂಕು ಉಪಾಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕ ಲಕ್ಮೀ ಪ್ರಸಾದ್ ಪೆರ್ಲ, ಖಜಾಂಚಿ ಅಶೋಕ್ ಆಚಾರ್ಯ, ಗ್ರಾ.ಪಂ. ಸದಸ್ಯ ಸುಭಾಷ್ ಆಳ್ವ ಉಪಸ್ಥಿತರಿದ್ದರು.
ತಾಲೂಕು ಸಂಘಟನಾ ಕಾರ್ಯದರ್ಶಿ ಹರೀಶ್ ರೈ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.