ಮಡಿಕೇರಿ, ಫೆ.17 :ಪಾಲೇಮಾಡು ಪೈಸಾರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವಾಸಿಗಳಿಗೆ ಈ ಹಿಂದೆ ಶವ ಸಂಸ್ಕಾರ ಮಾಡುತ್ತಿದ್ದ ಪ್ರದೇಶವನ್ನೆ ಸ್ಮಶಾನಕ್ಕಾಗಿ ನೀಡಬೇಕೆಂದು ಸಿಪಿಐಎಂ ಕಾರ್ಯ ದರ್ಶಿ ಡಾ| ಇ.ರ. ದುರ್ಗಾಪ್ರಸಾದ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಾಲೇಮಾಡಿನಲ್ಲಿ ವಿವಾದ ಸೃಷ್ಟಿಯಾಗುವುದಕ್ಕೆ ಸರಕಾರವೆ ನೇರಹೊಣೆ ಎಂದು ಆರೋಪಿಸಿದರು. ಈ ಭಾಗದಲ್ಲಿ 300 ಕ್ಕೂ ಅಧಿಕ ಕುಟುಂಬಗಳು ಕಳೆದ 12 ವರ್ಷಗಳಿಂದ ಜೀವನ ಸಾಗಿಸುತ್ತಿದ್ದು, ಸ್ಮಶಾನಕ್ಕೆಂದು ಗುರುತಿಸಲಾದ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಇದೇ ಪ್ರದೇಶದಲ್ಲಿ ಸ್ಮಶಾನ ಬೇಕೆಂದು ಒತ್ತಾಯ ಮಾಡುತ್ತಿರುವದರ ಹಿಂದೆ ಸ್ಥಳೀಯರ ಭಾವನಾತ್ಮಕ ಸಂಬಂಧ ಅಡಗಿದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರದ ಬೇಜವಾಬ್ದಾರಿತನ ದಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ಕ್ರೀಡಾಂಗಣಕ್ಕೆ ಸಂಬಂಧಪಟ್ಟವರ ನಡುವೆ ವೈಮನಸು ಬೆಳೆÉಯುತ್ತಿದೆ. ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ತಾನು ಮಾಡಿದ ತಪ್ಪನ್ನು ತಾನೇ ಸರಿಪಡಿಸಬೇಕೆಂದು ಆಗ್ರಹಿಸಿದರು.

ಶವಗಳನ್ನು ಸಂಸ್ಕಾರ ಮಾಡಿದ ಜಾಗವೆ ಕ್ರೀಡಾಂಗಣಕ್ಕೆ ಯಾಕೆ ಬೇಕೆಂದು ಪ್ರಶ್ನಿಸಿದ ಡಾ| ಇ.ರ.ದುರ್ಗಾಪ್ರಸಾದ್, ಕೊಡಗಿನಲ್ಲಿ ಬಂಡವಾಳಶಾಹಿ ಕಂಪೆನಿಗಳಿಂದ ಒತ್ತುವರಿಯಾಗಿರುವ ಸಾವಿರಾರು ಏಕರೆ ಭೂಮಿಯನ್ನು ತೆರವುಗೊಳಿಸಿದರೆ ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿ ದಂತೆ ಬೇರೆ ಬೇರೆ ಕ್ರೀಡಾಂಗಣ ಗಳನ್ನು ನಿರ್ಮಿಸಬಹು ದಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾಲೆಮಾಡು ಪೈಸಾರಿ ಯಲ್ಲಿ ನೆಲೆ ನಿಂತಿರುವವರು ದಲಿತರು ಹಾಗೂ ಬಡವರಾದ ಕಾರಣ ಸ್ಮಶಾನವನ್ನು ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದ ಇ.ರ.ದುರ್ಗಾಪ್ರಸಾದ್ ತಕ್ಷಣ ಕ್ರೀಡಾಂಗಣಕ್ಕೆ ಬೇರೆಡೆ ಜಾಗವನ್ನು ಗುರುತಿಸಿ ದುರ್ಬಲ ವರ್ಗದ ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪ್ರಮುಖರಾದ ಎ.ಸಿ.ಸಾಬು ಹಾಗೂ ಹೆಚ್.ಬಿ.ರಮೇಶ್ ಉಪಸ್ಥಿತರಿದ್ದರು.