ಗೋಣಿಕೊಪ್ಪಲು, ಫೆ. 17: ಕೊಡಗು ಜಿಲ್ಲೆಯಲ್ಲಿರುವ ಸಹಕಾರಿ ಸ್ವಾಮ್ಯದ ಬ್ಯಾಂಕುಗಳು ಕೇವಲ ಸ್ಥಿತಿವಂತರ, ಶ್ರೀಮಂತರ ಪರವಾಗಿದೆ ಎಂಬ ಟೀಕೆ ಇದೆ. ಜಿಲ್ಲೆಯಲ್ಲಿ ಹಲವರಿಗೆ ಆಸ್ತಿ ಇದ್ದರೂ ಆರ್‍ಟಿಸಿ ಇತ್ಯಾದಿ ರೆಕಾರ್ಡ್ ಸಮಸ್ಯೆ ಇದೆ. ಅಂತಹವರನ್ನೂ ಗುರುತಿಸಿ ಹಣಕಾಸು ಸಹಾಯ ಮಾಡಬಹುದಾಗಿದೆ. ‘ಜನ್-ಧನ್’ ಯೋಜನೆ ಮೂಲಕ ಕೇಂದ್ರ ಸರ್ಕಾರ ಬಡ ಮಧ್ಯಮವರ್ಗದ ಏಳಿಗೆಗೆ ಶ್ರಮಿಸುತ್ತಿದ್ದು ಸಹಕಾರ ಸ್ವಾಮ್ಯದ ಬ್ಯಾಂಕುಗಳೂ ಬಡವರ ಆರ್ಥಿಕ ಸ್ವಾವಲಂಬನೆಗೆ ಸಹಾಯ ಮಾಡಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಸಲಹೆ ನೀಡಿದರು.
ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ಯಾಂಕ್ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಬ್ಯಾಂಕ್ ಕಟ್ಟಡವನ್ನು ವಿಜಯಾ ಬ್ಯಾಂಕ್ ವ್ಯವಸ್ಥಾಪಕರಿಗೆ ಬಾಡಿಗೆ ಆಧಾರದಲ್ಲಿ ಹಸ್ತಾಂತರಿಸಲಾಯಿತು.
ಕಾನೂರು ಸಹಕಾರ ಸಂಘದ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಕಾನೂರು ಪ್ರಾಥಮಿಕ ಪತ್ತಿನ ಸಹಕಾರ ಬ್ಯಾಂಕ್ ಸುಮಾರು ರೂ. 58 ಲಕ್ಷ ಲಾಭದಲ್ಲಿದ್ದು, ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಿರುವದು ಶ್ಲಾಘನೀಯ. ಹಿರಿಯ ಸಹಕಾರಿಗಳು ಬ್ಯಾಂಕ್ ಏಳಿಗೆಗೆ ಸುಮಾರು 50 ಎಕರೆ ಕಾಫಿ ತೋಟವನ್ನೂ ನೀಡಿದ್ದು, ಬ್ಯಾಂಕ್ ಅಭಿವೃದ್ಧಿಗೆ ಪೂರಕವಾಗಿದೆ. ಯಾವದೇ ಬ್ಯಾಂಕ್‍ಗಳು ತಮ್ಮ ಅಸ್ತಿತ್ವ ಕಾಪಾಡಲು ಅಧಿಕ ಆಸ್ತಿಯನ್ನು ಸಂಪಾದಿಸಬೇಕು ಎಂದರು.
ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಜಿ.ಆರ್. ವಿಜಯಕುಮಾರ್ ಮಾತನಾಡಿ, ಪ್ರಾಥಮಿಕ ಸಹಕಾರ ಸಂಘಗಳಿಗೆ ಹೆಚ್ಚು ಸ್ವಾಯತ್ತತೆ ನೀಡಬೇಕು. ಬ್ಯಾಂಕ್ ಆಂತರಿಕ ವ್ಯವಹಾರದಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ಹಸ್ತಕ್ಷೇಪ ಇರಬಾರದು. ಕೇಂದ್ರದ ನೋಟು ಅಮಾನ್ಯ ಸಂದರ್ಭ ಸಹಕಾರಿ ಕ್ಷೇತ್ರದ ಬ್ಯಾಂಕ್‍ಗಳು ಒಂದಷ್ಟು ತೊಂದರೆ ಅನುಭವಿಸಿದರೂ, ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವಂತಾಗಬೇಕು. ಕೇವಲ ಬೆಳೆ ಸಾಲ, ಆಭರಣ ಸಾಲಕ್ಕೆ ಸಹಕಾರಿ ಬ್ಯಾಂಕುಗಳು ಸೀಮಿತವಾಗಬಾರದು ಎಂದು ಹೇಳಿದರು. ಬ್ಯಾಂಕಿನ ಸದಸ್ಯರು ಕೇವಲ ಲಾಭದ ದೃಷ್ಟಿಕೋನವಲ್ಲದೆ ಬ್ಯಾಂಕಿನ ಅಭಿವೃದ್ಧಿಗೆ ಹೆಚ್ಚು ವ್ಯವಹಾರ ಮಾಡಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ರೂಪೈ ಕಾರ್ಡ್’ ಯೋಜನೆ ಹಂತ ಹಂತವಾಗಿ ಅನುಷ್ಟಾನಗೊಳ್ಳಲಿದ್ದು ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲು ಉತ್ತಮ ಯೋಜನೆಯಾಗಿದೆ ಎಂದು ಮಂಜುನಾಥ್ ನುಡಿದರು.
ಇದೇ ಸಂದರ್ಭ ಕಾನೂರು ಗ್ರಾ.ಪಂ. ಅಧ್ಯಕ್ಷೆ ಲತಾ ಕುಮಾರಿ ಮಾತನಾಡಿ, ಕೇಂದ್ರದ ಜನ್‍ಧನ್ ಖಾತೆಯಂತೆ ಸಹಕಾರ ಬ್ಯಾಂಕ್‍ಗಳೂ ಆರ್ಥಿಕವಾಗಿ ಹಿಂದುಳಿದವರ ಅಭ್ಯುದಯಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ವಿಜಯಾ ಬ್ಯಾಂಕ್ ಹಾಸನ ರೀಜನಲ್ ಡಿಜಿಎಂ ನರೇಂದ್ರ ಭಟ್ ವಿಜಯಾ ಬ್ಯಾಂಕ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ, ಕಾನೂರು ಬ್ಯಾಂಕ್ ಶಾಖೆಯಲ್ಲೂ ‘ಎಟಿಎಂ’ ವ್ಯವಸ್ಥೆ ಸದ್ಯದಲ್ಲಿಯೇ ಆರಂಭಿಸಲಾಗುವದು.
ಭದ್ರತಾ ಕೊಠಡಿ ಉತ್ತಮವಾಗಿದ್ದು ಇನ್ನು ಮುಂದೆ ಚಿನ್ನಾಭರಣ ಸಾಲ ಸೌಲಭ್ಯವನ್ನೂ ನೀಡಲಾಗುವದು. ವಿಜಯಾ ಬ್ಯಾಂಕ್ ದೇಶದೆಲ್ಲೆಡೆ ಇದ್ದು ಕೃಷಿಕರ ಅಭಿವೃದ್ಧಿಗೂ ಒತ್ತು ನೀಡುತ್ತಾ ಬಂದಿದೆ. ರೂಪೈ ಕಾರ್ಡ್ ವ್ಯವಸ್ಥೆಯನ್ನೂ ಬ್ಯಾಂಕ್‍ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಕಾನೂರು ಸಹಕಾರಿ ಬ್ಯಾಂಕ್ ಅಭಿವೃದ್ಧಿ ಬಗ್ಗೆ ಎಪಿಎಂಸಿ ನಿರ್ದೇಶಕ ಮಾಚಂಗಡ ಸುಜಾ ಪೂಣಚ್ಚ, ಅಳಮೇಂಗಡ ತಮ್ಮಯ್ಯ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಮಾತನಾಡಿ, ಕಾನೂರು ಸಹಕಾರಿ ಬ್ಯಾಂಕ್ ಈ ಹಿಂದೆ ಹುಣಸೇ ಮರದ ಕೆಳಗೆ ಆರಂಭಗೊಂಡು ಇದೀಗ ಲಾಭದಾಯಕ ವಹಿವಾಟು ಮಾಡುತ್ತಿದೆ. ಸಂಘಕ್ಕೆ ಸೇರಿದ 50 ಎಕರೆ ಕಾಫಿ ತೋಟದ ಲೀಸ್ ಅವಧಿಯನ್ನು 2024 ರವರೆಗೆ ವಿಸ್ತರಿಸಲಾಗಿದೆ. ರೂ. 25 ಲಕ್ಷ ವೆಚ್ಚದ ಕಟ್ಟಡ ಕಾಮಗಾರಿ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದು ಶೇ. 10 ಪೆÇ್ರೀತ್ಸಾಹ ಧನ ನೀಡುವದಾಗಿ ಘೋಷಣೆ ಮಾಡಿದ್ದಾರೆ. ಸಾಲ ಮರುಪಾವತಿ ಇತ್ಯಾದಿಗಳಿಗಾಗಿ ಮೈಕ್ರೋ ಎಟಿಎಂ ಅನ್ನು ಸ್ಥಾಪಿಸುವ ಉದ್ಧೇಶವಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಜಯಾ ಬ್ಯಾಂಕ್ ವ್ಯವಸ್ಥಾಪಕ ರೊಜಾರಿಯೋ ಫರ್ನಾಂಡೀಸ್, ಸಹಕಾರ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್. ಉಮೇಶ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಎಂ.ಎಂ. ರತ್ನಕುಮಾರ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್, ಉಪಾಧ್ಯಕ್ಷ ಕೇಚಮಾಡ ಪಿ. ನಂಜಪ್ಪ, ನಿರ್ದೇಶಕರಾದ ಕೆ.ಜಿ. ಸದಾಶಿವ, ಮಾಚಿಮಾಡ ಸತೀಶ್, ಕಾಡ್ಯಮಾಡ ಎಸ್. ಬೋಪಣ್ಣ, ಕೆ.ಆರ್. ಸುರೇಶ್, ಚಿರಿಯಪಂಡ ಬೆಳ್ಯಪ್ಪ, ಹೆಚ್.ಕೆ. ಬೊಗ್ಗುರು, ಚಿರಿಯಪಂಡ ರೇಖಾ ಬೋಪಣ್ಣ, ಮನ್ನಕಮನೆ ಅಶ್ವಿನಿ ಹಾಗೂ ಪೆÇೀರಂಗಡ ಲೀನಾ ಬೋಪಣ್ಣ ಉಪಸ್ಥಿತರಿದ್ದರು.
- ಟಿ.ಎಲ್. ಶ್ರೀನಿವಾಸ್