ಕುಶಾಲನಗರ/ಕೂಡಿಗೆ ಫೆ. 17: ಗ್ರಾಮೀಣ ಜನರ ಆರ್ಥಿಕ ಬದುಕು ಸುಧಾರಣೆ ಮತ್ತು ಆರೋಗ್ಯದತ್ತ ಸರಕಾರ ಚಿಂತನೆ ಹರಿಸಿ ಹಲವು ಯೋಜನೆಗಳನ್ನು ರೂಪಿಸಿದೆ. ಮೇಕೆ ಸಾಕಾಣಿಕೆ ಮೂಲಕ ರೈತರಿಗೆ ಹಲವು ಅನುಕೂಲಗಳನ್ನು ಕಲ್ಪಿಸಿದ್ದು ಈ ನಿಟ್ಟಿನಲ್ಲಿ ಕೂಡಿಗೆ ಜರ್ಸಿ ಸಂವರ್ಧನಾ ಕ್ಷೇತ್ರದಲ್ಲಿ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಮೂಲಕ ಹಾಲು ಉತ್ಪಾದಕಾ ಮೇಕೆ ಸಾಕಾಣಿಕ ಘಟಕ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ರಾಜ್ಯ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಎ. ಮಂಜು ಹೇಳಿದರು.
ಕುಶಾಲನಗರದ ಸಮೀಪ ಕೂಡಿಗೆ ಬ್ಯಾಡಗೊಟ್ಟ ಗ್ರಾಮದಲ್ಲಿ ಘಟಕದ ಶಂಕುಸ್ಥಾಪನೆ ನೆರವೇರಿಸಿ ನಂತರ ಕೂಡಿಗೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮಾತನಾಡಿದ ಸಚಿವರು, ಮೇಕೆ ಸಾಕಾಣಿಕೆ, ಹಾಲು ಉತ್ಪಾದನೆ ಮೂಲಕ ರೈತರನ್ನು ಆರ್ಥಿಕ ಶಕ್ತರನ್ನಾಗಿ ಮಾಡಲು ಇಲಾಖೆ ಗ್ರಾಮೀಣ ಜನತೆಗೆ ಯೋಜನೆಯನ್ನು ರೂಪಿಸಿದೆ ಎಂದರು. ರೈತರು ಲಾಭದತ್ತ ಚಿಂತನೆ ಮಾಡಬೇಕು. ರಾಜ್ಯದಲ್ಲಿ ಈಗಾಗಲೆ ಪಶುಭಾಗ್ಯ ಯೋಜನೆ ಚಾಲ್ತಿಯಲ್ಲಿದ್ದು ತಾಲೂಕು ಮಟ್ಟದಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಮಹಿಳೆಯರಿಗೆ ಇಲಾಖೆ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದು ಘಟಕದ ಮೂಲಕ ಮೇಕೆಗಳ ಹಾಲು ಸಂಗ್ರಹ, ಪಾಶ್ಚರೀಕರಣ, ವಿದೇಶಕ್ಕೆ ಹಾಲಿನ ಉತ್ಪನ್ನ ಸರಬರಾಜು ಹಾಗೂ ರೈತರಿಗೆ ತರಬೇತಿ ನೀಡುವ ಮೂಲಕ ಜನಾಂಗದಿಂದ ಜನಾಂಗಕ್ಕೆ ಯೋಜನೆಯ ರೂಪುರೇಷೆಗಳನ್ನು ಮಾಡಲಾಗಿದೆ ಎಂದರು.
ಈ ಯೋಜನೆಗಳ ಸದುಪ ಯೋಗವನ್ನು ಗ್ರಾಮೀಣ ಜನತೆ ಪಡೆಯುವಂತೆ ಅವರು ಕೋರಿದರು.
ಬರಗಾಲದ ಹಿನ್ನೆಲೆಯಲ್ಲಿ ಕ್ಷೇತ್ರಗಳ ಶಾಸಕರ ಮುಖಾಂತರ 1 ಕೋಟಿ 35 ಲಕ್ಷ ಅನುದಾನ ಕಲ್ಪಿಸಲಾಗಿದೆ. ತಹಶೀಲ್ದಾರ್ಗಳ ಮೂಲಕ ಮೇವು ಸಂಗ್ರಹಣೆಗೆ 20 ಲಕ್ಷ ರೂಗಳ ಹಣ ಕಾಯ್ದಿರಿಸಲಾಗಿದೆ. ಜಿಲ್ಲಾಧಿಕಾರಿಗಳ
(ಮೊದಲ ಪುಟದಿಂದ) ಮುಖಾಂತರ ಟ್ಯಾಂಕರ್ಗಳಲ್ಲಿ ನೀರು ಒದಗಿಸಲು ಈಗಾಗಲೆ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ಪಶುವೈದ್ಯಕೀಯ ಇಲಾಖೆಯಿಂದ ವೈದ್ಯಾಧಿಕಾರಿಗಳು ಪ್ರತಿ ಮನೆಮನೆಗೆ ತೆರಳಿ ರಾಸುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ದೊಂದಿಗೆ ರೈತರ ಬೆನ್ನೆಲುಬಾಗಿ ಸರಕಾರ ನಿಂತಿದೆ ಎಂದರು.
ಹೋಬಳಿ ಮಟ್ಟದಲ್ಲಿ ಇಲಾಖೆಯ ನೌಕರರಿಗೆ ಸರಕಾರಿ ವಾಹನ ಒದಗಿಸಲಾಗಿದೆ ಎಂದ ಅವರು ಮೇಕೆ ಹಾಲು ಪ್ರತಿಯೊಬ್ಬರೂ ಬಳಕೆ ಮಾಡುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕೂಡಿಗೆ ರೆಡ್ ಡೆನ್ ಪ್ರಾಜೆಕ್ಟ್ನಲ್ಲಿ ಇರುವ ಕಟ್ಟಡಗಳ ನಿರ್ವಹಣೆಗೆ ಸಚಿವರು ಕಾಯಕಲ್ಪ ಕಲ್ಪಿಸಬೇಕು. ಇಲಾಖೆಯಲ್ಲಿ ಸಮರ್ಪಕವಾಗಿ ಔಷಧಿ ಸರಬರಾಜು ಆಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಎಲ್ಲಿಯೂ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಈ ಸಂದರ್ಭ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಡಿ.ಎಸ್.ಗಣೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮತ್ತಿತರ ಜನಪ್ರತಿನಿದಿ üಗಳು ಇದ್ದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯುಕ್ತ ಎಸ್. ಶೇಖರ್ ಪ್ರಾಸ್ತಾವಿಕ ನುಡಿಗಳಾಡಿದರು. ಇಲಾಖೆಯ ಅಪರನಿರ್ದೇಶಕ ಡಾ. ಎಂ.ಟಿ. ಮಂಜುನಾಥ್ ಇಲಾಖೆಯ ಯೋಜನೆಗಳ ಮಾಹಿತಿ ಒದಗಿಸಿದರು. ಇಲಾಖೆಯ ಜಂಟಿ ನಿರ್ದೇಶಕ ಡಾ. ದೇವದಾಸ್ ಸ್ವಾಗತಿಸಿದರು, ಡಾ. ಬಸವರಾಜು ನಿರೂಪಿಸಿದರು, ಉಪನಿರ್ದೇಶಕ ಡಾ.ಎಂ.ಸಿ. ಪದ್ಮನಾಭ್ ವಂದಿಸಿದರು.