ಮಡಿಕೇರಿ, ಫೆ. 17: ರೈತರ ಏಳಿಗೆಗಾಗಿ ಸಹಕಾರ ಸಂಘಗಳನ್ನು ಆರಂಭಿಸಲಾಗಿದ್ದು, ರೈತರ ಹಿತವನ್ನು ಕಾಪಾಡುವದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಕರೆ ನೀಡಿದರು.ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹಾಗೂ ನಬಾರ್ಡ್ ಸಹಯೋಗದೊಂದಿಗೆ ನಗರದ ಕ್ರಿಸ್ಟಲ್ ಹಾಲ್‍ನಲ್ಲಿ ಆಯೋಜಿಸಲಾದ ರುಪೇ ಕಾರ್ಡ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ರುಪೇ ಕಿಸಾನ್ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದರು.ಸಹಕಾರಿ ಸಂಘಗಳು ಇಂದು ಬೇರೆ ಬೇರೆ ಒತ್ತಡಗಳಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಬಡ್ಡಿ ರಹಿತ ಸಾಲ ನೀಡುವದರಿಂದ ಸಹಕಾರ ಸಂಘಗಳಿಗೆ ನಷ್ಟವಾಗುವ ಸಂಭವವಿದೆ. ಇದನ್ನು ಸರಿದೂಗಿಸಲು ಆದಾಯವನ್ನು ತರುವ ಕಡೆಗಳಲ್ಲಿ ಹಣವನ್ನು ತೊಡಗಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರ ಸಹಕಾರ ಸಂಘಗಳಿಗೆ ಭಾರೀ ಪೆಟ್ಟು ಬಿದ್ದಿದೆ. ಇದನ್ನು ಸರಿದೂಗಿಸಲು ದಶಕಗಳೇ ಬೇಕಾಗುತ್ತದೆ ಎಂದ ಅವರು ರೈತರು ಬೆಳೆದ ಫಸಲಿನ ಬೆಲೆಯನ್ನು ಮಾರಾಟಗಾರರು ನಿಗದಿಪಡಿ ಸುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಸಂಭವವೇ ಹೆಚ್ಚು. ಜನಸಂಪರ್ಕ ಸಭೆಗಳಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಜಮೀನು ಸಂಬಂಧಿತ ದಾಖಲೆಗಳ ಸಮಸ್ಯೆಗಳನ್ನು ಪರಿಹರಿಸು ವಂತಾಬೇಕು. ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳು ಉತ್ತಮ ಕರ್ತವ್ಯ ನಿರ್ವಹಿಸಿದಲ್ಲಿ ಸಂಘಗಳು ಪ್ರಗತಿ ಕಾಣಲಿದೆ. ರಾಜ್ಯದಲ್ಲಿ ಕೊಡಗು ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉತ್ತಮ ಪ್ರಗತಿಯಲ್ಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್. ರಮಣ್ಣ ರೆಡ್ಡಿ ಪೋಶ್ ಬಿಡುಗಡೆ ಮಾಡಿ ಮಾತನಾಡಿ, ಸಹಕಾರ ಸಂಘಗಳ ಸಮಸ್ಯೆ ಹಾಗೂ ಸವಾಲುಗಳ ಆತ್ಮಾವಲೋಕನ ಅಗತ್ಯ. ಜಿಲ್ಲೆಯಲ್ಲಿ 68 ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಲಾಭದಲ್ಲಿದೆ. ಆದರೆ ಇದೀಗ ಸಹಕಾರ ಸಂಘಗಳಿಗೆ ಪ್ರತಿಸ್ಪರ್ಧಿಗಳು ಹೆಚ್ಚಾಗಿವೆ. ವಾಣಿಜ್ಯ ಬ್ಯಾಂಕ್‍ಗಳು ಹಾಗೂ ಖಾಸಗಿ ವಾಣಿಜ್ಯ ಬ್ಯಾಂಕ್‍ಗಳು ಕ್ಯಾಶ್‍ಲೆಸ್ ಹಾಗೂ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದು, ಸಹಕಾರಿ ಸಂಘಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಮೈಕ್ರೋ ಎಟಿಎಂ ಕಾರ್ಡ್ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ರೈತ ದೇಶದ ಬೆನ್ನೆಲುಬು. ಸಹಕಾರಿ ಸಂಘಗಳು ರೈತರ ಬೆನ್ನೆಲುಬು ಆಗಿದೆ. ರೈತರು ಬೆಳೆ ವಿಮೆಯನ್ನು ಮಾಡಿಸುವ ಮೂಲಕ ಬೆಳೆ ಪರಿಹಾರವನ್ನು ಪಡೆದುಕೊಳ್ಳುವಂತಾಗಬೇಕು. ಮುಂದಿನ ಮುಂಗಾರು ಸಂದರ್ಭ ಎಲ್ಲಾ ರೈತರು ಬೆಳೆ ವಿಮೆ ಮಾಡಿಸುವಂತಾಗಬೇಕು ಎಂದರು.

ರುಪೇ ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸಿ ನಬಾರ್ಡ್ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಮಾತನಾಡಿ, ಪ್ರತಿಯೊಬ್ಬ ರೈತರು ಕಿಸಾನ್ ಹಾಗೂ ಡೆಬಿಟ್ ಕಾರ್ಡ್ ಹೊಂದಿಕೊಳ್ಳುವ ಮೂಲಕ ಯಾವದೇ ಸಮಯದಲ್ಲಿ ರೈತರು ನಗದನ್ನು ಪಡೆದುಕೊಳ್ಳಬಹುದು. ಕಾರ್ಡ್‍ಗಳಿಂದ ಸಹಕಾರ ಸಂಘಗಳಿಗೆ ಯಾವದೇ ರೀತಿಯ ಭಯವಿಲ್ಲ. ರೈತರು ಈ ಹಿಂದೆ ಪಾವತಿಸಿದ ರೀತಿಯಲ್ಲೇ ತಮ್ಮ ಸಾಲದ ಹಣವನ್ನು ಮರುಪಾವತಿ ಮಾಡುತ್ತಾರೆ ಎಂದು ರೈತರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರ ಕೇಂದ್ರ ಬ್ಯಾಂಕ್‍ಗೆ 96 ವರ್ಷಗಳ ಇತಿಹಾಸವಿದ್ದು, ರೈತರ ಆರ್ಥಿಕ ಅಗತ್ಯತೆಗೆ ತಕ್ಕುದಾಗಿ ಸ್ವಲ್ಪ ಮಟ್ಟಿನ ಸಾಧನೆ ತೋರಲಾಗಿದೆ. ಎಲ್ಲೆಡೆ ಬದಲಾವಣೆಗಳಾಗುತ್ತಿದ್ದು, ಸಹಕಾರ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾರ್ಯವಾಗಿದೆ. ಆಧುನಿಕ ಸೌಲಭ್ಯಗಳಿಗೆ ಹೊಂದಿಕೊಳ್ಳ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 34,000 ರೈತರಿಗೆ ರುಪೇ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘದ ಅಸ್ತಿತ್ವಕ್ಕೆ ಯಾವದೇ ಧಕ್ಕೆಯಾಗಬಾದರು. ಜಾಗದ ದಾಖಲಾತಿಯ ಸಮಸ್ಯೆ ಯಿಂದ ರೈತರಿಗೆ ಸಾಲ ಹೊಂದಿಕೊಳ್ಳಲು ಸಮಸ್ಯೆಯಾಗಿದೆ. ಸಮಸ್ಯೆಯನ್ನು ಜಿಲ್ಲಾಧಿಕಾರಿ ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಗಳಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ಮನವಿಯೊಂದನ್ನು ಜಿಲ್ಲಾಧಿಕಾರಿಗಳು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಕಾರ್ಯನಿರ್ವ ಹಣಾಧಿಕಾರಿಗಳಿಗೆ ಸಲ್ಲಿಸಿದರು.

ಬೋಜಮ್ಮ ಪ್ರಾರ್ಥಿಸಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ವಿಜಯಕುಮಾರ್ ಸ್ವಾಗಿತಿಸಿದರು. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ವಂದಿಸಿದರು

.