ಮಡಿಕೇರಿ, ಫೆ. 17; ಆಸ್ಟ್ರೇಲಿಯಾದ ಸಿಡ್ನಿಯ ಲಿವರ್ ಪೂಲ್ ಸಿಟಿಯ ಕೌನ್ಸಿಲರ್ ಆಗಿ ಕೊಡಗಿನ ಉದಯೋನ್ಮುಖ ಪ್ರತಿಭಾನ್ವಿತ ಯುವತಿ ಡಾ. ಕಲಿಯಂಡ ಚರಿಷ್ಮ ಅವರನ್ನು ಅಲ್ಲಿಯ ಆಡಳಿತ ಮಂಡಳಿ ಸರ್ವಾನುಮತದಿಂದ ಆಯ್ಕೆಗೊಳಿಸಲಾಗಿದೆ.

ಡಾ. ಚರಿಷ್ಮ ಅವರು ಮೂಲತಃ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕಲಿಯಂಡ ಮೊಣ್ಣಪ್ಪ ಅವರ ಪುತ್ರ ಮಾದಪ್ಪ (ಜಯ) ಮತ್ತು ಬಾನುಮತಿ (ಚೊಟ್ಟೇರ ಕಾವೇರಪ್ಪನವರ ಪುತ್ರಿ) ಈ ದಂಪತಿಯ ಪುತ್ರಿಯಾಗಿದ್ದು, ಈ ಕುಟುಂಬ ವರ್ಗದವರೆಲ್ಲರೂ ಪ್ರಸ್ತುತ ಸಿಡ್ನಿಯ ಲಿವರ್ ಪೂಲ್ ಸಿಟಿಯಲ್ಲಿ ನೆಲೆಸಿದ್ದಾರೆ.

ಕಲಿಯಂಡ ಮಾದಪ್ಪ ಮತ್ತು ಬಾನುಮತಿ ಕುಟುಂಬ ಈ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದ ಸಂದರ್ಭ, 1987ರ ಡಿ.2ರಂದು ಚರಿಷ್ಮ ಜನಿಸಿದ್ದರು. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದರೂ, ಆ ನಂತರದ ವರ್ಷಗಳ ಬಳಿಕ ಮಾದಪ್ಪ ಕುಟುಂಬ ವರ್ಗದವರೆಲ್ಲರೂ ಸಿಡ್ನಿಯ ಲಿವರ್ ಪೂಲ್ ಸಿಟಿಗೆ ತೆರಳಿ ಅಲ್ಲಿ ನೆಲೆಸಿದ್ದಾರಲ್ಲದೆ, ಲಿವರ್ ಪೂಲ್ ಸಿಟಿಯ ಪೌರತ್ವವನ್ನು ಪಡೆದಿದ್ದರು. ಇದರ ಮಧ್ಯೆ ಸಿಡ್ನಿಯಲ್ಲಿ 2 ವರ್ಷಗಳ ಹಿಂದೆ ಲಿವರ್ ಪೂಲ್ ಸಿಟಿಯ ಚುನಾವಣೆಗೆ ಚರಿಷ್ಮ ಅವರು ಲೇಬರ್ ಪಾರ್ಟಿಯಿಂದ ಸ್ಪರ್ಧಿಸಿ, ಕೆಲವೇ ಕೆಲವು ಮತಗಳ ಅಂತರದಿಂದ ಸೋಲನ್ನು ಅನುಭವಿಸಬೇಕಾಯಿತು. ಆನಂತರದ ದಿನಗಳಲ್ಲಿ ಚರಿಷ್ಮ ಅವರನ್ನು ಲೇಬರ್ ಪಾರ್ಟಿಯ ಉನ್ನತ ಮಟ್ಟದ ಮುಖಂಡರುಗಳು ಸರ್ವಾನುಮತದಿಂದ ಡಾ. ಚರಿಷ್ಮ ಅವರನ್ನು ಕೌನ್ಸಿಲರ್ ಆಗಿ ಆಯ್ಕೆ ಮಾಡಿದ್ದಾರೆ. ಡಾ. ಚರಿಷ್ಮ ಅವರು ಲಿವರ್ ಪೂಲ್ ಸಿಟಿಯಲ್ಲಿ ಸೈಕಿಯಾಟ್ರಿಸ್ಟ್ ವೈದ್ಯೆಯಾಗಿ ಮತ್ತೂ ಥೆರಾಪಿಸ್ಟ್ ಆಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ಮತ್ತೆ ಅಲ್ಲಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಪಕ್ಷ ಲೆಕ್ಕಾಚಾರ ಹಾಕುತ್ತಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಸಿಟಿಯ ಮೇಯರ್ ಆಗುವ ಸಂಭವವಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಡಾ. ಚರಿಷ್ಮ ಅವರ ಸಹೋದರ ತರುಣ್ ತಿಮ್ಮಯ್ಯ ಕೂಡ ಸಿಡ್ನಿಯಲ್ಲೇ ತಮ್ಮ ಕುಟುಂಬ ವರ್ಗದವರೊಂದಿಗೆ ನೆಲೆಸಿದ್ದಾರೆ.

ಸನ್ಮಾನ

ಇತ್ತೀಚೆಗೆ ನಾಪೋಕ್ಲು ಸನಿಹದ ನಾಲಡಿ ಗ್ರಾಮದಲ್ಲಿರುವ ಕುಟುಂಬಸ್ಥರ ಐನ್‍ಮನೆಯಲ್ಲಿ ಡಾ. ಚರಿಷ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.