ಮಡಿಕೇರಿ, ಫೆ. 17: ಜಿಲ್ಲೆಯ ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ 2ನೆ ವರ್ಷದ ಐಪಿಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಏರ್ಪಡಿಸಿರುವದಾಗಿ ಸಂಘದ ಪ್ರಮುಖರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮುಸ್ತಫ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಂಘವು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಉಚಿತ ಪುಸ್ತಕ ವಿತರಣೆ, ಬಡ ಕುಟುಂಬಗಳಿಗೆ ಆರ್ಥಿಕ ನೆರವು, ತುರ್ತು ಸಂದರ್ಭಗಳಲ್ಲಿ ರಕ್ತದಾನ ಸೇರಿದಂತೆ ಸಮಾಜ ಸೇವೆಯೊಂದಿಗೆ ವಿವಿಧ ರೀತಿಯ ಗ್ರಾಮೀಣ ಕ್ರೀಡಾಕೂಟ ಗಳನ್ನು ನಡೆಸುತ್ತಾ ಬಂದಿದ್ದು, ಈ ಬಾರಿ ಕೊಡಗು ಜಿಲ್ಲೆಯ ಕ್ರಿಕೆಟ್ ಆಟಗಾರರನ್ನು ಸೇರಿಸಿ ಐಪಿಎಲ್ ಮಾದರಿಯಲ್ಲಿ (ಹರಾಜು) ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಏಪ್ರಿಲ್ 15 ರಿಂದ ಸಿದ್ದಾಪುರ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಪಂದ್ಯಾಟವು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಪಂದ್ಯಾಟದಲ್ಲಿ ಕೇವಲ 16 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯಾವಳಿಯಲ್ಲಿ ತಂಡಗಳನ್ನು ಬಿಡ್ಡಿಂಗ್ ಮಾಡಲು ಇಚ್ಛಿಸುವವರು ಮಾರ್ಚ್ 5 ರೊಳಗೆ ಹೆಸರುಗಳನ್ನು ನೋಂದಾಯಿಸಿ ಕೊಳ್ಳಬೇಕು ಹಾಗೂ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಆಟಗಾರರಿಗಾಗಿ ಜಿಲ್ಲೆಯಾದ್ಯಂತ ಆಟಗಾರರ ಅರ್ಜಿ ನಮೂನೆಯನ್ನು ವಿತರಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾ. 10 ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ರೂ. 1,11,111 ನಗದು ಹಾಗೂ ದ್ವಿತೀಯ ಸ್ಥಾನಕ್ಕೆ ರೂ. 55,555 ನಗದು ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ಬಹುಮಾನ ನೀಡಲಾಗುವದು. ಹೆಚ್ಚಿನ ಮಾಹಿತಿಗಾಗಿ 9886813225, 8971613666, 9945537701 ಸಂಖ್ಯೆಯನ್ನು ಸಂಪರ್ಕಿಸಲು ಕೋರಿದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಎಂ ಹಾರಿಸ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎ ಅಜೀಜ್, ಸದಸ್ಯರಾದ ಅಕ್ಷಯ್, ರೋಣಿತ್ ಮತ್ತು ಪ್ರಸಾದ್ ಇದ್ದರು.