ನಾಪೋಕ್ಲು, ಫೆ. 18: ಮಡಿಕೇರಿಯ ಕಾಫಿ ಮಂಡಳಿ ವಿಸ್ತರಣಾ ವಿಭಾಗದ ವತಿಯಿಂದ ಕಾಫಿ ಬೆಳೆಗಾರರ ಸಮೂಹ ಸಂಪರ್ಕ ಕಾರ್ಯಕ್ರಮದಡಿಯಲ್ಲಿ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೇತು, ಕಿರುಂದಾಡು, ಕೈಕಾಡು ಮತ್ತು ಬಾವಲಿ ಗ್ರಾಮಗಳ ಕಾಫಿ ತೋಟದಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ನೀಡಿದ ತೋಟಗಳಿಗೆ ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳನ್ನೊಳಗೊಂಡ ತಂಡಗಳು ತಾ. 20 ರಂದು ಭೇಟಿ ನೀಡಲಿವೆ.
ಈ ಸಂದರ್ಭ ತೋಟಗಳ ವೀಕ್ಷಣೆ ಹಾಗೂ ಮಣ್ಣು ಪರೀಕ್ಷೆ ವರದಿಯ ಆಧಾರದ ಮೇಲೆ ಸಂಬಂಧಪಟ್ಟ ತೋಟಗಳ ಸುಧಾರಣೆ ಪಡಿಸುವ ಬಗ್ಗೆ ಅಧಿಕಾರಿಗಳು ಪೂರಕ ಮಾಹಿತಿ ನೀಡಲಿದ್ದಾರೆ.
ಇದರ ಸಮಾರೋಪ ಸಮಾರಂಭವು ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾ. 21 ರಂದು ಬೆಳಿಗ್ಗೆ 10.30ಕ್ಕೆ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಹಾಸನ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಟಿ.ಸಿ. ಹೇಮಂತ್ ಕುಮಾರ್ ಹಾಗೂ ಕೊಣಂಜಗೇರಿ ಗ್ರಾ.ಪಂ. ಅಧ್ಯಕ್ಷೆ ಕೋಚಮಂಡ ವನಿತಾ ತಮ್ಮಯ್ಯ, ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೊಳಕಾರಂಡ ಮಂದಣ್ಣ, ಮಡಿಕೇರಿ ವಲಯ ಉಪನಿರ್ದೇಶಕ ರಾಮ ಗೌಂಡರ್, ನಾಪೋಕ್ಲು ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ಬೊಪ್ಪಂಡ ಕೆ. ಪೂಣಚ್ಚ ಭಾಗವಹಿಸಲಿದ್ದಾರೆ.